

ನವದೆಹಲಿ: ಪ್ರೀತಿಗೆ ಯಾವುದೇ ಜಾತಿ, ಧರ್ಮ, ಭಾಷೆ, ಗಡಿ ಹಾಗೂ ವಯಸ್ಸಿನ ಮಿತಿ ಇಲ್ಲ. ಪವಿತ್ರ ಪ್ರೀತಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಈ ಕ್ಯೂಟ್ ಲವ್ ಸ್ಟೋರಿ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯರು ವಿದೇಶಿಯರನ್ನು ಮದುವೆಯಾಗುವುದು ಸಾಮಾನ್ಯವಾಗಿದೆ. ಆದರೆ, ಬಹಳ ಹಿಂದೆ ಇದು ಬಹಳ ಅಪರೂಪವಾಗಿತ್ತು. ಇತ್ತೀಚೆಗಷ್ಟೇ ಒಡಿಶಾ ವ್ಯಕ್ತಿ ಮತ್ತು ಜಪಾನಿ ಮಹಿಳೆ ನಡುವಿನ ಹಳೆಯ ಪ್ರೇಮಕಥೆ ವೈರಲ್ ಆಗಿದೆ. ಅವರ ಮಗ ರ್ಯಾಪರ್ ಸಮೀರ್ ರಿಶು ಮೊಹಾಂತಿ, ವಿಡಿಯೋ ಒಂದನ್ನು ಶೇರ್ ಮಾಡಿದ್ದು, ತನ್ನ ಪಾಲಕರ ಬಗ್ಗೆ ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
ತನ್ನ ತಾಯಿ ಜಪಾನ್‌ನವರು ಮತ್ತು ತಂದೆ ಭಾರತದ ಒಡಿಶಾ ರಾಜ್ಯದವರು ಎಂದು ಬಹಿರಂಗಪಡಿಸಿದ್ದಾರೆ. ಇಬ್ಬರ ನಡುವೆ ಹೇಗೆ ಪ್ರೀತಿ ಹುಟ್ಟಿತು ಎಂಬುದನ್ನು ತನ್ನ ರ್ಯಾಪರ್ ಬಿಗ್ಡೀಲ್ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಮೀರ್ ರಿಶು ಮೊಹಾಂತಿ ವಿವರಿಸಿದ್ದಾರೆ. ಸದ್ಯ ಈ ಜೋಡಿ ಒಡಿಶಾದ ಪುರಿಯಲ್ಲಿ ಹೋಟೆಲ್ ನಡೆಸುತ್ತಿದೆ.
ರ್ಯಾಪರ್ ಬಿಗ್ಡೀಲ್ ಹೇಳಿದ ಕತೆಯ ಪ್ರಕಾರ, ಅವನ ತಾಯಿ ಕಾಲೇಜಿನಲ್ಲಿ ಓದುವಾಗ ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದರು. ಆದರೆ, ನನ್ನ ತಾಯಿಗೆ ಪುರಿ ಅಂದರೆ ತುಂಬಾ ಇಷ್ಟ. ಆದ್ದರಿಂದ, ಪದವಿ ಶಿಕ್ಷಣ ಮುಗಿದ ನಂತರ ಪುರಿಯಲ್ಲಿ ನೆಲೆಸಲು ಬಯಸಿದರು ಮತ್ತು ಪುಸ್ತಕ ಬರವಣಿಗೆಯನ್ನು ಮುಂದುವರಿಸಲು ಬಯಸಿದರು. ಆದರೆ, ಪ್ರತಿಯೊಬ್ಬರಿಗೂ ಆದಾಯದ ಮೂಲ ಬೇಕು. ಹೀಗಾಗಿ ಅವರು ಜಪಾನಿನ ಪ್ರವಾಸಿಗರಿಗೆ ಹೋಟೆಲ್ ನಿರ್ಮಿಸಲು ಬಯಸಿದರು ಎಂದು ಸಮೀರ್ ರಿಶು ಮೊಹಾಂತಿ ಹೇಳಿದರು.
ನನ್ನ ತಾಯಿ ವಿದೇಶಿ ಪ್ರಜೆಯಾದ ಕಾರಣ ಅವರ ಹೋಟೆಲ್‌ಗೆ ಭೂಮಿ ಖರೀದಿಸಲು ಸಾಧ್ಯವಾಗಲಿಲ್ಲ. ಅವಳು ಅಂತಿಮವಾಗಿ ನನ್ನ ತಂದೆಯನ್ನು ಭೇಟಿಯಾದರು ಮತ್ತು ಮದುವೆಯಾದರು. ಬಳಿಕ ಒಟ್ಟಾಗಿ ಹೋಟೆಲ್ ಅನ್ನು ನಿರ್ಮಿಸಿ ಅದಕ್ಕೆ 'ಲವ್ ಅಂಡ್ ಲೈಫ್' ಎಂದು ಹೆಸರಿಟ್ಟರು. ಇಬ್ಬರು ವ್ಯಾಪಾರ ಜತೆಗೆ ಜೀವನದಲ್ಲೂ ಪಾಲುದಾರರಾದರು. ಈ ಹೋಟೆಲ್ ಇಂದಿಗೂ ಪುರಿಯಲ್ಲಿ ಇದೆ. "ನನ್ನ ಅಪ್ಪ-ಅಮ್ಮನ ಪ್ರೇಮಕಥೆಗೆ ಇದು ಸಾಕ್ಷಿ. ಕೆಲವು ಪ್ರೇಮಕಥೆಗಳು ಜೀವಮಾನವಿಡೀ ಉಳಿಯುವುದು ನಿಜ ಎಂದು ಹೇಳುತ್ತಾ ಸಮೀರ್ ರಿಶು ಮೊಹಾಂತಿ ಮಾತು ಮುಗಿಸಿದರು.
ರ್ಯಾಪರ್ ಸಮೀರ್ ಶೇರ್ ಮಾಡಿರುವ ವಿಡಿಯೋವನ್ನು ಸಾಕಷ್ಟು ಮಂದಿ ಲೈಕ್ ಮಾಡಿದ್ದು, ಈಗಾಗಲೇ ಲಕ್ಷಗಟ್ಟಲೆ ವೀಕ್ಷಣೆ ಪಡೆದಿದ್ದಾರೆ. ಅನೇಕ ಮಂದಿ ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದು, ಜಪಾನಿನ ತಾಯಿ ಶ್ರೇಷ್ಠ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಬ್ಬರ ಲವ್ ಸ್ಟೋರಿ ಚೆನ್ನಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. (ಏಜೆನ್ಸೀಸ್)