

ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ಕೆಲವು ದಿನಗಳ ಹಿಂದೆ ಪ್ರಾರಂಭವಾಗಿದೆ. ಈ ಮಧ್ಯೆ, ಅಕ್ಟೋಬರ್ 22ರಂದು ಇನ್ನೊಂದು ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಇದು ಹೊಸ ಟೀಸರ್ ಬಿಡುಗಡೆಯಾಗಿದೆ.
ಇದು ಜ್ಯೂನಿಯರ್ ಎನ್ಟಿಆರ್ ಅವರ ಕೊಮರಂ ಭೀಮ್ ಅವರ ಪಾತ್ರವನ್ನು ಪರಿಚಯಿಸುವ ಟೀಸರ್. ಈ ಹಿಂದೆ, ರಾಮ್ಚರಣ್ ತೇಜ ಅವರನ್ನು ಪರಿಚಯಿಸುವ ಟೀಸರ್ವೊಂದನ್ನು ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ, ಟೀಸರ್ ಜ್ಯೂನಿಯರ್ ಎನ್ಟಿಆರ್ ಅವರದ್ದಾದರೂ, ಅದಕ್ಕೆ ಧ್ವನಿ ನೀಡಿರುವುದು ರಾಮ್ಚರಣ್ ತೇಜ.
ಈ ಹಿಂದೆ, ರಾಮ್ಚರಣ್ ಅವರ ಟೀಸರ್ಗೆ ಜ್ಯೂನಿಯರ್ ಎನ್ಟಿಆರ್ ಧ್ವನಿ ನೀಡಿದ್ದರು. ಇದೀಗ ಜ್ಯೂನಿಯರ್ ಎನ್ಟಿಆರ್ ಟೀಸರ್ಗೆ ರಾಮ್ಚರಣ್ ತೇಜ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ, ಟೀಸರ್ ತೆಲುಗು, ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಿಗೂ ರಾಮ್ಚರಣ್ ಧ್ವನಿ ನೀಡಿದ್ದಾರೆ. ಈಗಾಗಲೇ ಈ ಟೀಸರ್ಗಳು ಯೂಟ್ಯೂಬ್ನಲ್ಲಿ ಸಖತ್ ವೈರಲ್ ಆಗಿವೆ.
ಮೂಲಗಳ ಪ್ರಕಾರ, 'ಆರ್ಆರ್ಆರ್' ಚಿತ್ರದ ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಕೊಳ್ಳುವುದಕ್ಕೆ ಸ್ಟಾರ್ ನೆಟ್ವರ್ಕ್ ಮುಂದಾಗಿದ್ದು, ಈಗಾಗಲೇ ಚಿತ್ರತಂಡದವರ ಜತೆಗೆ ಮಾತುಕತೆ ನಡೆಸಿದೆಯಂತೆ. ಅದರ ಪ್ರಕಾರ, ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ, ಸ್ಟಾರ್ ಸಮೂಹ 200 ಕೋಟಿ ರೂಪಾಯಿಗಳನ್ನು ಕೊಡುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಜನವರಿಯಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಜ್ಯೂನಿಯರ್ ಎನ್ಟಿಆರ್, ರಾಮ್ಚರಣ್ ತೇಜ, ಅಜಯ್ ದೇವಗನ್ ಸೇರಿದಂತೆ ಎಲ್ಲಾ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ.