ಗಜಕೇಸರಿ ಯೋಗದಲ್ಲಿ ಮಗುವಿನ ಜನನ; ಖುಷಿಯ ಅಲೆಯಲ್ಲಿ ಅರ್ಜುನ್​ ಸರ್ಜಾ

collage (15)
Published on

ಬೆಂಗಳೂರು: ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮೇಘನಾ ರಾಜ್​ ರಾಘವೇಂದ್ರ ರಾಯರ ದಿನವಾದ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಆರೋಗ್ಯವಾಗಿದ್ದು, ಜೂ, ಚಿರುವಿನ ಫೋಟೋ ಸಹ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ನಡುವೆ ಸದ್ಯ ಸಿನಿಮಾ ಕೆಲಸಗಳ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಅರ್ಜುನ್​ ಸರ್ಜಾ ಈ ಸುದ್ದಿಯನ್ನು ಕೇಳಿ ಸಂಭ್ರಮಿಸಿದ್ದಾರೆ. ‘36 ವರ್ಷಗಳ ಹಿಂದೆ ಚಿರು ಜನಿಸಿದಾಗ ಚೆನ್ನೈನಿಂದ ಓಡಿ ಬಂದಿದ್ದೆ. ಇದೀಗ ಆತನ ಮಗುವನ್ನು ನೋಡಲು ಓಡಿ ಬರುತ್ತಿದ್ದೇನೆ. ನಿಜಕ್ಕೂ ಒಂದು ಕಷ್ಟದ ಜತೆಗೆ ಖುಷಿಯ ಸುದ್ದಿಯನ್ನೂ ಆ ದೇವರು ಕರುಣಿಸಿದ್ದಾನೆ. ಈ ಶುಭ ಘಳಿಗೆಯ ಹೊತ್ತಿನಲ್ಲಿ ನಮ್ಮ ಹುಡುಗ ಚಿರು ಇದ್ದಿದ್ದರೆ ಅದೆಷ್ಟು ಸಂಭ್ರಮಿಸುತ್ತದ್ದನೋ ಗೊತ್ತಿಲ್ಲ. ಈಗಲೂ ಎಲ್ಲೋ ಒಂದು ಕಡೆ ನಿಂತು ಇದೆಲ್ಲವನ್ನು ನೋಡುತ್ತಿರುತ್ತಾನೆ. ಆತನ ಇಲ್ಲ ಎಂಬುದನ್ನು ನೆನಸಿಕೊಂಡರೆ ದುಃಖ ಬರುತ್ತದೆ. ಆ ನೋವನ್ನು ಮರೆಸಲು ಜೂ. ಚಿರು ಆಗಮಿಸಿದ್ದಾನೆ. ನಮ್ಮ ಅಮ್ಮನ ಮೊಗದಲ್ಲಿ ನಾಲ್ಕು ತಿಂಗಳ ಬಳಿಕ ಸಂತಸವನ್ನು ನೋಡುತ್ತಿದ್ದೇನೆ. ಈ ಮಗು ಇಷ್ಟೊಂದು ಮನಸುಗಳಿಗೆ ಖುಷಿ ನೀಡುತ್ತಾನೆ ಎಂದುಕೊಂಡಿರಲಿಲ್ಲ. ತಾಯಿ ಮತ್ತು ಮಗುವಿನ ಮೇಲೆ ನಿಮ್ಮ ಆಶೀರ್ವಾದ ವಿರಲಿ’ ಎಂದು ಭಾವುಕವಾಗಿ ಮಾತನಾಡಿದ್ದಾರೆ.

ಇನ್ನು ಗುರುರಾಘವೇಂದ್ರ ರಾಯರ ವಾರದಂದೇ ಮಗು ಜನ್ಮ ನೀಡಿದ್ದು, ಗಜಕೇಸರಿ ಯೋಗದಲ್ಲಿ ಹುಟ್ಟಿದೆ ಎಂದು ಗೊತ್ತಾಗಿದೆ. ನವರಾತ್ರಿ ಶುಭ ದಿನದಂದು ಮಗುವಿನ ಜನನವಾಗಿದ್ದು, ಒಳ್ಳೆಯ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ.

ಇದೆಲ್ಲಕ್ಕಿಂತ ವಿಶೇಷ ಏನೆಂದರೆ, 2017ರ ಅಕ್ಟೋಬರ್​ 22ರಂದೇ ಮೇಘನಾ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅದೇ ಶುಭ ದಿನದಂದೇ ಮಗು ಜನಿಸಿದೆ. ಬೆಳಗ್ಗೆ 11.07 ನಿಮಿಷಕ್ಕೆ ಮಗುವಿನ ಜನನವಾಗಿದ್ದು, ಚಿಕ್ಕಪ್ಪ ಧ್ರುವ ಸರ್ಜಾ ಮಗುವನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಸಹ ಸದ್ಯ ಹರಿದಾಡುತ್ತಿದೆ. ಇತ್ತ ನಾರ್ಮಲ್​ ಹೆರಿಗೆಯಾಗಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net