

ಚೆನ್ನೈ: ಇದಾಗಲೇ ಎರಡು ಮದುವೆಯಾಗಿ, ಅವರಿಂದ ವಿಚ್ಛೇದನ ಪಡೆದ ಮೂರು ಮಕ್ಕಳ ತಾಯಿ ನಟಿ ವನಿತಾ ವಿಜಯಕುಮಾರ್ ಅವರ ಮೂರನೆಯ ದಾಂಪತ್ಯದಲ್ಲಿಯೂ ಬಿರುಕು ಉಂಟಾಗಿದೆ.
ಬಿಗ್ಬಾಸ್ ಸ್ಪರ್ಧಿಯೂ ಆಗಿದ್ದ ವನಿತಾ, ಲಾಕ್ಡೌನ್ ವೇಳೆ ವಿಎಫ್ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜತೆ ಮದುವೆಯಾಗಿದ್ದರು. ಆದರೆ ಇಬ್ಬರೂ ಒಟ್ಟಿಗೇ ಇಲ್ಲ, ವನಿತಾರ ಮನೆಯಲ್ಲಿ ಮೂರನೆಯ ಪತಿ ಕಾಣುತ್ತಿಲ್ಲ ಎಂದು ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.
ಇದು ಭಾರಿ ಸುದ್ದಿಯಾಗುತ್ತಿದ್ದಂತೆಯೇ ಫೇಸ್ಬುಕ್ ಲೈವ್ನಲ್ಲಿ ಬಂದಿರುವ ನಟಿ ವನಿತಾ, ಮೂರನೆಯ ಪತಿಯ ವಿರುದ್ಧ ಕಂಪ್ಲೇಂಟ್ ಮಾಡುತ್ತಾ, ಕಣ್ಣೀರು ಹಾಕಿದ್ದಾರೆ.
ಅವರು ಹೇಳಿದ್ದು ಹೀಗಿದೆ...
ಹಿಂದೆ ಎರಡು ಮದುವೆಯಿಂದ ಮೂವರು ಮಕ್ಕಳಿದ್ದಾರೆ. ಸಮಾಜದಲ್ಲಿ ಮಕ್ಕಳ ಆರೈಕೆಗೆ ಒರ್ವ ಪುರುಷನ ಅವಶ್ಯಕತೆ ಹಿನ್ನೆಲೆ ಮೂರನೇ ಮದುವೆಯಾಗಿದ್ದೆ. ಪೀಟರ್ ಭೇಟಿಯಾದಾಗ ಅವರನ್ನು ಪ್ರೀತಿಸಲು ಶುರುಮಾಡಿದೆ. ಅವರೂ ಮದುವೆಯಾಗುವಂತೆ ಕೇಳಿದರು. ನನ್ನ ಮಕ್ಕಳು ಇದಕ್ಕೆ ಒಪ್ಪಬೇಕು ಎಂದು ಅವರಿಗೆ ಹೇಳಿದೆ. ನಂತರ ನನ್ನ ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು.
ಆದರೆ ಪೀಟರ್ ಕುಡಿತದ ದಾಸನಾಗಿದ್ದ ಎನ್ನುವುದು ನನಗೆ ಗೊತ್ತಿರಲಿಲ್ಲ. ಮದುವೆಯಾದರೂ ಮದ್ಯ ಸೇವನೆ ಬಿಡಲಿಲ್ಲ. ನಾನು ತಾಳ್ಮೆ ಕಳೆದುಕೊಳ್ಳದೇ ಸಂಸಾರ ಮಾಡುತ್ತಿದ್ದೆ.
ನಿರಂತರ ಮದ್ಯ ಸೇವನೆಯಿಂದಾಗಿ ಪೀಟರ್ಗೆ ಹೃದಯಾಘಾತವಾಗಿತ್ತು. ಒಳ್ಳೆಯ ಚಿಕಿತ್ಸೆ ಕೊಡಿಸಿದ್ದೆ. ಗುಣಮುಖನಾದರೂ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಚಟದಿಂದ ಹೊರ ಬರಲೇ ಇಲ್ಲ. ಒಮ್ಮೆ ರಕ್ತ ವಾಂತಿಯಾಗಿ ಐಸಿಯುನಲ್ಲಿ ಇರಿಸಲಾಗಿತ್ತು. ಅಲ್ಲಿಂದ ಡಿಸ್ಚಾರ್ಜ್ ಆದ ಮೇಲೆ ಕುಡಿಯುವುದಕ್ಕಾಗಿ ಎಲ್ಲರ ಬಳಿ ಹಣ ಕೇಳಲಾರಂಭಿಸಿದ. ಸಿನಿಮಾದ ಕೆಲ ಸಹೊದ್ಯೋಗಿಗಳು ಈ ಬಗ್ಗೆ ನನ್ನನ್ನು ವಿಚಾರಿಸತೊಡಗಿದರು. ಇದು ಸುದ್ದಿಯಾಗಿ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಯಿತು.
ಇದರಿಂದ ಪೀಟರ್ ಮತ್ತಷ್ಟು ಕುಗ್ಗಿಹೋದ. ಒಂದು ದಿನ ಪೀಟರ್ ಸೋದರ ಮೃತಪಟ್ಟರು. ಪೀಟರ್ ತುಂಬ ದುಃಖದಲ್ಲಿದ್ದರು. ನನ್ನಿಂದ ಹಣ ಪಡೆದು ಹೋದ ಪೀಟರ್ ನನ್ನನ್ನು ಇದುವರೆಗೆ ನನ್ನ ಸಂಪರ್ಕಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಕೆಲವರು ಆರೋಪ ಮಾಡಿದಂತೆ ತಾವು ಪೀಟರ್ನನ್ನು ತ್ಯಜಿಸಿರುವ ಬಗ್ಗೆ ಅವರು ಮಾತನಾಡಲಿಲ್ಲ.
ನಟಿ ವನಿತಾ 2000ರಲ್ಲಿ ಕಿರುತೆರೆ ನಟ ಆಕಾಶ್ ಜತೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2007ರಲ್ಲಿ ವಿಚ್ಛೇದನ ಪಡೆದು ಅದೇ ವರ್ಷ ಉದ್ಯಮಿ ಆನಂದ್ ಜಯರಾಜನ್ ಜತೆ ವಿವಾಹವಾದರು. ಈ ದಂಪತಿಗೆ ಒಂದು ಮಗಳು ಜನಿಸಿದಳು. 2012ರಲ್ಲಿ ಅವರಿಂದಲೂ ದೂರವಾಗಿದ್ದ ವನಿತಾ, 2013-2017 ರವರೆಗೆ ನಿರ್ದೇಶಕ ರಾಬರ್ಟ್ ಜತೆಗೆ ವನಿತಾ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದರು ಎಂಬ ಸುದ್ದಿ ಹರಡಿತ್ತು. ನಂತರ ಲಾಕ್ಡೌನ್ ಅವಧಿಯಲ್ಲಿ ಜೂನ್ 27ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ವಿವಾಹವಾಗಿದ್ದರು.
ವನಿತಾ ಕಾಲಿವುಡ್ನ ಹಿರಿಯ ನಟ ವಿಜಯ್ ಕುಮಾರ್ ಅವರ ಮಗಳು. ತಮಿಳು ಮತ್ತು ಮಲೆಯಾಳಿ ಸಿನಿಮಾದಲ್ಲಿ ನಟಿಸಿದ್ದಾರೆ. `ಚಂದ್ರಲೇಖಾ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರೂ, ಹೆಚ್ಚಾಗಿ ಗುರುತಿಸಿಕೊಂಡಿದ್ದು ಧಾರಾವಾಹಿಗಳಲ್ಲಿ. ತಮಿಳಿನ ಬಿಗ್ಬಾಸ್ ರಿಯಾಲಿಟಿ ಶೋ ಸ್ಪರ್ಧೆಯೂ ಆಗಿದ್ದರು.