

ನವದೆಹಲಿ: ತನ್ನನ್ನು ಹಿಂಬಾಲಿಸುತ್ತಿರುವ ಯುವಕನೊಬ್ಬ ಮನೆಗೆ ಬಂದು ತನ್ನ ಪಾಲಕರಿಗೆ ನೀಡುತ್ತಿದ್ದ ಹಿಂಸೆಯನ್ನು ತಾಳಲಾರದೇ ದೆಹಲಿಯ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭಜನಾಪುರದ ಬಿ.ಎಡ್ ಓದುತ್ತಿರುವ ವಿದ್ಯಾರ್ಥಿನಿ 23 ವರ್ಷದ ನಾಜಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ನಿಗೂಢವಾಗಿಯೇ ಉಳಿದಿತ್ತು. ಪಾಲಕರಿಗೆ ಕೂಡ ಈಕೆ ಏಕೆ ಇಂಥ ಕೃತ್ಯ ಎಸಗಿದಳು ಎನ್ನುವುದೇ ತಿಳಿದಿರಲಿಲ್ಲ. ಆದರೆ ಇದೀಗ ನಾಜಿಶಾಳ ಕೊಠಡಿಯಲ್ಲಿ ಸಿಕ್ಕಿರುವ ಡೆತ್ನೋಟ್ ಸತ್ಯಾಂಶವನ್ನು ಬಹಿರಂಗಪಡಿಸಿದೆ.
ಆಗಿದ್ದೇನು? ಐಪಿ ಯುನಿವರ್ಸಿಟಿಯಲ್ಲಿ ಬಿ.ಎಡ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಜಿಶಾ ಇದೇ 12ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಅಪ್ಪ-ಅಮ್ಮ ಧಾವಿಸಿ ಬಂದು ಮಗಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ.
ಪೊಲೀಸರು ಆತ್ಮಹತ್ಯೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪಾಲಕರಿಗೂ ಮಗಳೇಕೆ ಹೀಗೆ ಮಾಡಿಕೊಂಡಳು ಎನ್ನುವುದು ತಿಳಿದುಬಂದಿರಲಿಲ್ಲ. ನಂತರ ಪೊಲೀಸರು ನಾಜಿಶಾಳ ಕೋಣೆ ಪರಿಶೀಲಿಸಿದಾಗ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಲೋನಿ ನಿವಾಸಿ ಹಾಜಿ ಸಲ್ಮಾನ್ ಕಾರಣ ಎಂದು ನಾಜಿಶಾ ಬರೆದಿದ್ದಾಳೆ. ಸಲ್ಮಾನ್ ಯಾವಾಗಲೂ ಈಕೆಯನ್ನು ಹಿಂಬಾಲಿಸುತ್ತಿದ್ದ. ಇದರಿಂದ ನಾಜಿಶಾ ನೊಂದುಹೋಗಿದ್ದಳು. ಆತನ ಕಾಟ ತಾಳಲಾರದೇ ಬೇಸತ್ತಿದ್ದಳು.
ಇದನ್ನೂ ಓದಿ: ಮಧ್ಯರಾತ್ರಿ ನಡುಗಿದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್: ಭೂಮಿಯ ಕಂಪನಕ್ಕೆ ಜನರು ತತ್ತರ
ಯುವತಿ ತನ್ನ ಬುಟ್ಟಿಗೆ ಬೀಳುತ್ತಿಲ್ಲ ಎನ್ನುವುದನ್ನು ಅರಿತ ಸಲ್ಮಾನ್ ಆಗಸ್ಟ್ 9ರಂದು ನೇರವಾಗಿ ಆಕೆಯ ಮನೆಗೆ ಬಂದಿದ್ದಾನೆ. ನಂತರ ಪಾಲಕರಿಗೆ ಬೆದರಿಕೆ ಹಾಕಿದ್ದಾನೆ. ಈ ಸಂದರ್ಭದಲ್ಲಿ ಭಾರಿ ಗಲಾಟೆ ನಡೆದಿದೆ. ನಾಜಿಶಾಳ ಕುಟುಂಬಸ್ಥರು ಮತ್ತು ಸ್ಥಳೀಯರು ಸಲ್ಮಾನ್ನನ್ನು ಹಿಡಿದು ಥಳಿಸಿ ಕಳುಹಿಸಿದ್ದರು.
ಇದರಿಂದ ನಾಜಿಶಾ ಇನ್ನೂ ಕುಗ್ಗಿ ಹೋಗಿದ್ದಳು. ತನ್ನಿಂದಾಗಿ ಮನೆಯವರಿಗೆ ಈ ರೀತಿಯ ಹಿಂಸೆ ಆಗಿರುವುದನ್ನು ಕಂಡ ಅವಳು, ಹೊರಗಡೆ ಹೋಗುವುದಕ್ಕೂ ಭಯಪಟ್ಟು ಮನೆಯೊಳಕ್ಕೆ ಇರುತ್ತಿದ್ದಳು. ಹೊರಗೆ ಹೋದರೆ ಸಲ್ಮಾನ್ ಸಿಗಬಹುದು, ಮತ್ತೆ ಏನಾದರೂ ಹಾನಿ ಮಾಡಬಹುದು ಎನ್ನುವ ಭಯದಿಂದ ಮನೆಯಲ್ಲಿಯೇ ಇದ್ದು ಖಿನ್ನತೆಗೆ ಜಾರಿದ್ದಳು.
ಅಕ್ಕ ಪಕ್ಕದ ಮನೆಯವರಿಗೂ ಈ ವಿಷಯ ಗೊತ್ತಾದ ಕಾರಣ ಹಾಗೂ ತನ್ನ ಪಾಲಕರು ತನ್ನಿಂದಾಗಿ ಹಿಂಸೆ ಅನುಭವಿಸಿದರು ಎನ್ನುವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ ನಾಜಿಶಾ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನಿಂದಾಗಿ ನಿಮಗೆ ತುಂಬಾ ತೊಂದರೆಯಾಯಿತು, ನನ್ನನ್ನು ಕ್ಷಮಿಸಿಬಿಡಿ ಎಂದು ಡೆತ್ನೋಟ್ನಲ್ಲಿ ನಾಜಿಶಾ ಬರೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ನಾಜಿಶಾ ಮತ್ತು ಸಲ್ಮಾನ್ ಫೇಸ್‍ಬುಕ್ ನಲ್ಲಿ ಗೆಳೆಯರಾಗಿದ್ದರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಜಿಶಾಳ ಮರಣೋತ್ತರ ಶವ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಸಲ್ಮಾನ್ ವಿರುದ್ಧ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದೆ.