ಮುಂಬೈ ಡ್ರಗ್ಸ್​ ಕೇಸ್​: 'ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ' ಎಂದ ಎನ್​ಸಿಬಿ ಅಧಿಕಾರಿ

sameer
Published on

ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್ ಪುತ್ರನನ್ನು ಬಂಧಿಸಲಾಗಿರುವ ಮುಂಬೈ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನ ತನಿಖಾಧಿಕಾರಿಯಾಗಿರುವ ಎನ್​ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್​ ವಾಂಖೇಡೆ ಅವರು "ನನ್ನನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಕೆಲವರು ನನ್ನ ವಿರುದ್ಧ ದುರುದ್ದೇಶದಿಂದ ಕೂಡಿದ ಕಾನೂನು ಕ್ರಮ ನಡೆಸುವ ಪ್ರಯತ್ನದಲ್ಲಿದ್ದಾರೆ" ಎಂದು ದೂರಿದ್ದಾರೆ.

ಡ್ರಗ್ಸ್​ ಕೇಸಿನ ತನಿಖೆ ದುರುದ್ದೇಶಪೂರಿತವಾಗಿದೆ ಎಂದು ಬಿಂಬಿಸುವ ಪ್ರಯತ್ನ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಪ್ರಕರಣದ ಸಾಕ್ಷಿ ಎನ್ನಲಾದ ಪ್ರಭಾಕರ್​ ಸೇಲ್​ ಎನ್​ಸಿಬಿ ಅಧಿಕಾರಿ ವಾಂಖೇಡೆಗೆ ಕೇಸಿನ ಸಂಬಂಧವಾಗಿ 8 ಕೋಟಿ ರೂಪಾಯಿ ನೀಡಲಾಗಿದೆ ಎಂದು ಭಾನುವಾರ ಸಲ್ಲಿಸಿದ ಅಫಿಡೆವಿಟ್​ನಲ್ಲಿ ಆರೋಪ ಮಾಡಿದ್ದರು.

ಇದೀಗ ಎನ್​ಸಿಬಿ ಪರ ವಕೀಲರು ಎರಡು ಅಫಿಡೆವಿಟ್​ಗಳನ್ನು ಇಂದು ಎನ್​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಎನ್​ಸಿಬಿ ತನ್ನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದರೆ, ಸಮೀರ್​ ವಾಂಖೇಡೆ ವೈಯಕ್ತಿಕವಾಗಿ ಸಲ್ಲಿಸಲಿರುವ ಅಫಿಡೆವಿಟ್​ನಲ್ಲಿ​, ತಮ್ಮನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದಿದ್ದಾರೆ. "ನನ್ನ ಸೋದರಿ ಮತ್ತು ಮೃತ ತಾಯಿ ಸೇರಿದಂತೆ ನನ್ನ ಕುಟುಂಬವನ್ನು ಟಾರ್ಗೆಟ್​ ಮಾಡುತ್ತಿದ್ದಾರೆ" ಎಂದು ವಾಂಖೇಡೆ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಎನ್​ಸಿಬಿ ಕಾರ್ಯಾಚರಣೆಯನ್ನು ಖಂಡಿಸುತ್ತಾ ಬಂದಿರುವ ಎನ್​ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಅವರು ಇತ್ತೀಚೆಗಷ್ಟೆ, ವಾಂಖೇಡೆ ಒಂದು ವರ್ಷದಲ್ಲಿ ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಈ ಅಧಿಕಾರಿಯು ಬಿಜೆಪಿ ಕೈಗೊಂಬೆಯಾಗಿ ಜನರ ವಿರುದ್ಧ ಸುಳ್ಳು ಕೇಸುಗಳನ್ನು ಸೃಷ್ಟಿಸುತ್ತಾನೆ ಎಂದು ಆಪಾದಿಸಿದ್ದರು ಎನ್ನಲಾಗಿದೆ.

ಇದೇ ಹಿನ್ನೆಲೆಯಲ್ಲಿ ಸಮೀರ್​ ವಾಂಖೇಡೆ ಮುಂಬೈ ಪೊಲೀಸ್​​ ಮುಖ್ಯಸ್ಥರಿಗೂ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ತಮಗೆ ಕೆಲಸದಿಂದ ವಜಾಗೊಳಿಸುವುದಾಗಿ ಮತ್ತು ಜೈಲಿಗೆ ಹಾಕಿಸುವುದಾಗಿ ಸಾರ್ವಜನಿಕ ಹುದ್ದೆಗಳಲ್ಲಿರುವ ಗೌರವಾನ್ವಿತ ವ್ಯಕ್ತಿಗಳಿಂದ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net