

ಮುಂಬೈ: ಡ್ರಗ್ಸ್ ಕೇಸ್‌ನಲ್ಲಿ ಜೈಲುಪಾಲಾಗಿ ಜಾಮೀನು ಸಿಗದೇ ಒದ್ದಾಡುತ್ತಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮಾನಸಿಕ ನೆಮ್ಮದಿಗಾಗಿ ಈಗ ಶ್ರೀರಾಮನ ಮೊರೆ ಹೋಗಿದ್ದಾನೆ. ಮುಂಬೈನ್ ಆರ್ಥರ್ ರೋಡ್ ಜೈಲಿನಲ್ಲಿ ಇರುವ ಆರ್ಯನ್ ರಾಮ ಮತ್ತು ಸೀತೆಯ ಪುಸ್ತಕ ತರಿಸಿಕೊಂಡು ಓದುತ್ತಿದ್ದಾನೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ಜೈಲಿನಲ್ಲಿ ಇರುವ ಕೈದಿಗಳ ಪೈಕಿ ಹೆಚ್ಚಿನವರು ಮಾನಸಿಕವಾಗಿ ಕುಗ್ಗಿ ಹೋಗುವ ಹಿನ್ನೆಲೆಯಲ್ಲಿ ಅವರ ಇಷ್ಟದ ಪುಸ್ತಕಗಳನ್ನು ಓದಲು ಸಲಹೆ ನೀಡಲಾಗುತ್ತದೆ. ಜೈಲಿನಲ್ಲಿ ಇರುವ ಗ್ರಂಥಾಲಯದಿಂದ ಅವರು ಕೇಳಿದ ಪುಸ್ತಕ ನೀಡಲಾಗುತ್ತದೆ. ಆರ್ಯನ್ ತನಗೆ ರಾಮ ಮತ್ತು ಸೀತೆಯ ಕಥೆಯಿರುವ ಪುಸ್ತಕವನ್ನು ಓದಲು ಇಷ್ಟಪಟ್ಟಿರುವ ಹಿನ್ನೆಲೆಯಲ್ಲಿ ಅದನ್ನು ತರಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧ್ಯಾತ್ಮ, ಸದಾಚಾರ ಮುಂತಾದ ಒಳ್ಳೆಯ ವಿಚಾರಕ್ಕೆ ಸಂಬಂಧಿಸಿದ ಕೃತಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಮನೆಯಿಂದಲೂ ಪುಸ್ತಕ ತರಿಸಿಕೊಂಡು ಓದಬಹುದು. ಹೀಗೆ ತರಿಸಿಕೊಂಡ ಪುಸ್ತಕಗಳನ್ನು ಕೈದಿಗಳು ಜೈಲುಬಿಟ್ಟು ಹೋಗುವಾಗ ಇಲ್ಲಿಯೇ ಇರಿಸಿದರೆ, ಅವುಗಳನ್ನು ಕೂಡ ಲೈಬ್ರರಿಯಲ್ಲಿ ಇಡಲಾಗುವುದು ಎಂದು ಅವರು ಹೇಳಿದ್ದಾರೆ.
ಹುಟ್ಟುತ್ತಲೇ ಆಗರ್ಭ ಸಿರಿವಂತಿಕೆ ನೋಡಿ, ಕೈಕಾಲುಗಳಿಗೆ ಆಳುಕಾಳುಗಳನ್ನು ಹೊಂದಿರುವ ಆರ್ಯನ್ ಖಾನ್‌ಗೆ ಜೈಲಿನಲ್ಲಿ ಹೊಂದಿಕೊಳ್ಳುವುದು ಕಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಪುಸ್ತಕದ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಸಲಹೆ ನೀಡಲಾಗಿದೆ. ಆದ್ದರಿಂದ ಅವರಿಗೆ ಪುಸ್ತಕಗಳ ಆಯ್ಕೆ ಮಾಡಲು ಹೇಳಲಾಗಿತ್ತು. ಆಗ ಆರ್ಯನ್, ‘ದಿ ಲಯನ್ಸ್ ಗೇಟ್’ ಪುಸ್ತಕ ಓದಿ ಮುಗಿಸಿದ್ದಾರೆ. ಇದಾದ ಮೇಲೆ ರಾಮನ ಪುಸ್ತಕ ಓದಲು ಶುರು ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ನಡುವೆ ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದ್ದರಿಂದ ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.