

ಮುಂಬೈ: ಇತ್ತೀಚೆಗಷ್ಟೇ ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾದ ತಾಂಡವ್ ವೆಬ್ಸಿರೀಸ್ ಇದೀಗ ಹಲವು ವಿವಾದಕ್ಕೆ ಕಾರಣವಾಗಿದೆ. ಸರಣಿಯಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮತ್ತು ದೇವರ ಬಗ್ಗೆ ಅಪ್ರಚಾರ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದಲೂ ಅಮೆಜಾನ್ ಪ್ರೈಂಗೆ ನೋಟಿಸ್ ರವಾನೆಯಾಗಿದೆ.
ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಮತ್ತು ಕಥೆ ಬರೆದ ಗೌರವ್ ಸೋಲಂಕಿ ವಿರುದ್ಧ ಉತ್ತರ ಪ್ರದೇಶದ ಹಜರತ್ ಗಂಜ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೆಬ್ಸರಣಿಯಲ್ಲಿ ಹಿಂದೂ ದೇವತೆಗಳನ್ನು ತಪ್ಪಾಗಿ ತೋರಿಸಿ, ಶಾಂತಿ ಸೌಹಾರ್ದತೆ ಕದಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈಗಾಗಲೇ ತಾಂಡವ್ ವೆಬ್ಸಿರೀಸ್ ಬಗ್ಗೆ ಬಿಜೆಪಿಯ ಸಂಸದ ಮನೋಜ್ ಕೋಟಕ್ ಸಹ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆ ಬೆಳವಣಿಗೆಯ ಬೆನ್ನಲ್ಲೇ, ಸಚಿವ ಪ್ರಕಾಶ್ ಜಾವಡೇಕರ್ ಪ್ರೈಂಗೆ ಸತ್ಯಾಸತ್ಯತೆ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ನಟಿ ಜಾಕ್ಲೀನ್ ಫರ್ನಾಂಡೀಸ್
ಸೈಫ್ ಅಲಿಖಾನ್, ಡಿಂಪಲ್ ಕಪಾಡಿಯಾ, ಸುನೀಲ್ ಗ್ರೋವರ್, ತಿಗ್ಮಾಂಶು ಧೂಲಿಯಾ ಸೇರಿ ಹಲವರು ನಟಿಸಿದ್ದಾರೆ. ಅಲಿ ಅಬ್ಬಾಸ್ ಜಾಫರ್ ಮತ್ತು ಕಿಶನ್ ಮೆಹ್ರಾ ಈ ವೆಬ್ಸರಣಿಗೆ ನಿರ್ದೇಶನ ಮಾಡಿದ್ದಾರೆ. ರಾಜಕೀಯ ಹಿನ್ನೆಲೆಯ ಈ ವೆಬ್ಸಿರೀಸ್ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹ ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಬಂಧನಕ್ಕೆ ಆದೇಶಿಸಿದ್ದಾರೆ. ಇತ್ತ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿರುವ ನಟ ಸೈಫ್ ಅಲಿಖಾನ್ ಮನೆಗೆ ಭದ್ರತೆ ಒದಗಿಸಲಾಗಿದೆ. (ಏಜೆನ್ಸೀಸ್)