

ನವದೆಹಲಿ: ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗುತ್ತಿರುವ ಆನ್‌ಲೈನ್ ತರಬೇತಿ ಕೋರ್ಸ್‌ನಲ್ಲಿ ತಾಲಿಬಾನ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭಾಗವಹಿಸುವ ಸಾಧ್ಯತೆ ಇದ್ದು ಕಾಬೂಲ್‌ಗೆ ಸಂಬಂಧಿಸಿದಂತೆ ನವದೆಹಲಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಮಾರ್ಚ್ 14ರಿಂದ 17ರ ಸಮಯದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM)-ಕೋಝಿಕೋಡ್ ನಡೆಸಲಿರುವ ಕೋರ್ಸ್‌ಗೆ ನೋಂದಾಯಿಸಿಕೊಳ್ಳುವಂತೆ ತನ್ನ ಅಧಿಕಾರಿಗಳಿಗೆ ತಾಲಿಬಾನ್ ವಿದೇಶಾಂಗ ಸಚಿವಾಲಯದ ಅಧೀನದಲ್ಲಿರುವ ಅಫ್ಘಾನಿಸ್ತಾನದ ಇನ್‌ಸ್ಟಿಟ್ಯೂಟ್ ಆಫ್ ಡಿಪ್ಲೋಮಸಿ ಮುಖ್ಯಸ್ಥರಿಂದ ಪತ್ರ ಹೋಗಿದ್ದು ಎಲ್ಲರಿಗೂ ದಿಗ್ಭ್ರಮೆಯನ್ನು ಉಂಟುಮಾಡಿದೆ.
ಈ ಕೋರ್ಸ್ ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ನಡೆಯುತ್ತಿರುವ ITEC ಕಾರ್ಯಕ್ರಮದ ಭಾಗವಾಗಿದ್ದು ಅಫ್ಘಾನಿಸ್ತಾನ ಮಾತ್ರವಲ್ಲದೆ ವಿವಿಧ ದೇಶಗಳ ಪ್ರಜೆಗಳಿಗೆ ಮುಕ್ತವಾಗಿದೆ ಎಂದು ಹೇಳಲಾಗಿದೆ.
"ಕೋರ್ಸ್ ಸಂಪೂರ್ಣವಾಗಿ ಆನ್‌ಲೈನ್ ರೂಪದಲ್ಲಿದ್ದು IIMನಿಂದ ನಡೆಸಲ್ಪಡುತ್ತದೆ. ಈ ಕೋರ್ಸ್‌ನಲ್ಲಿ ಭಾಗಿಯಾಗಲು ಯಾರೂ ಭಾರತಕ್ಕೆ ಬರುತ್ತಿಲ್ಲ”ಎಂದು ಆಧಿಕಾರಿಗಳಲ್ಲಿ ಒಬ್ಬರು ಹೇಳಿದರು. ಈ ಬೆಳವಣಿಗೆಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ITEC ಯ ಅಧಿಕೃತ ಹ್ಯಾಂಡಲ್, ಸೋಮವಾರದ ತನ್ನ ಟ್ವೀಟ್‌ನಲ್ಲಿ ಈ ಕೋರ್ಸ್ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಮೀಸಲಾಗಿದೆ ಎಂದು ಹೇಳಿದೆ.
ಕಳೆದ ವರ್ಷ ಜೂನ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಪುನಃ ತೆರೆಯುವ ಮೂಲಕ ಕಾಬೂಲ್‌ನಲ್ಲಿ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿದರೂ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಗುರುತಿಸಲು ಭಾರತ ಈವರೆಗೆ ನಿರಾಕರಿಸಿದೆ. "ತಾಂತ್ರಿಕ ತಂಡ" ಎಂದು ಕರೆಯಲ್ಪಡುವ ರಾಜತಾಂತ್ರಿಕರ ಒಂದು ಸಣ್ಣ ಗುಂಪು ಪ್ರಸ್ತುತ ಕಾಬೂಲ್‌ನಲ್ಲಿದೆ. ಅಫ್ಘಾನಿಸ್ತಾನದಾದ್ಯಂತ ಅಭಿವೃದ್ಧಿ ಯೋಜನೆಗಳಿಗೆ ಬೆಂಬಲವನ್ನು ಪುನರಾರಂಭಿಸುವ ಬಗ್ಗೆ ಭಾರತ ಇನ್ನೂ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಇದನ್ನೂ ಓದಿ: ತಾಲಿಬಾನ್ ಆಡಳಿತ ಸಮರ್ಥಿಸಿಕೊಂಡ ಪ್ರತಾಪಸಿಂಹ
ತಾಲಿಬಾನ್ ವಿದೇಶಾಂಗ ಸಚಿವಾಲಯದ ಅಧೀನದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಡಿಪ್ಲೊಮಸಿಯ ಡೈರೆಕ್ಟರ್ ಜನರಲ್ ಮುಫ್ತಿ ನೂರುಲ್ಲಾ ಅಜ್ಜಮ್ ಅವರು ಹೊರಡಿಸಿದ ಪತ್ರದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿಗಾಗಿ ಭಾರತೀಯ ರಾಯಭಾರ ಕಚೇರಿಯು ಐಐಎಂ ಅಲ್ಪಾವಧಿಯ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ' ಎಂದು ಹೇಳಿದೆ.
ತರಬೇತಿ ಕಾರ್ಯಕ್ರಮವು ತಾಲಿಬಾನ್ ವಿದೇಶಾಂಗ ಸಚಿವಾಲಯದ ಎಲ್ಲಾ ಆಂತರಿಕ ಮತ್ತು ಪ್ರಾಂತೀಯ ಕಚೇರಿಗಳಿಗೆ ಕಳುಹಿಸಲಾದ ಪತ್ರದ ಇಂಗ್ಲಿಷ್ ಅನುವಾದದ ಪ್ರಕಾರ "ಇಮ್ಮರ್ಸಿಂಗ್ ವಿತ್ ಇಂಡಿಯಾ ಥಾಟ್ಸ್" ಎಂಬ ವಿಷಯವನ್ನು ಹೊಂದಿದೆ. ಭಾಗವಹಿಸುವ ಎಲ್ಲರು ಕಾರ್ಯಕ್ರಮದ ಕೊನೆಯಲ್ಲಿ ವಿಷಯಗಳು ಮತ್ತು ಅವರ ಕಲಿಕೆಯ ಕುರಿತು ಸಂಕ್ಷಿಪ್ತ ವರದಿಯನ್ನು ಡಿಪ್ಲೊಮಸಿ ಸಂಸ್ಥೆಗೆ ಸಲ್ಲಿಸಬೇಕು ಎಂದು ಪತ್ರದಲ್ಲಿ ಸೇರಿಸಲಾಗಿದೆ. ತಾಲಿಬಾನ್‌ಗಳು ತಮ್ಮ ಆಡಳಿತಕ್ಕೆ ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮನ್ನಣೆ ಪಡೆಯಲು ಪದೇ ಪದೇ ಪ್ರಯತ್ನಗಳನ್ನು ಮಾಡಿದ್ದು, ಜನರು ಪತ್ರದ ಸೋರಿಕೆಯನ್ನು ಈ ದೃಷ್ಟಿಯಲ್ಲಿ ನೋಡಬೇಕು.
ಇನ್‌ಸ್ಟಿಟ್ಯೂಟ್ ಆಫ್ ಡಿಪ್ಲೋಮಸಿ, ಕಾಬೂಲ್‌ನಲ್ಲಿರುವ ಇತರ ಎಲ್ಲಾ ಅಧಿಕೃತ ಸಂಸ್ಥೆಗಳಂತೆ ಈಗ ಸಂಪೂರ್ಣವಾಗಿ ತಾಲಿಬಾನ್‌ನ ನಿಯಂತ್ರಣದಲ್ಲಿದೆ. ಅದರಂತೆ, ಸಂಸ್ಥೆಯ ಹೆಚ್ಚಿನ ಅಧಿಕಾರಿಗಳು ಮತ್ತು ಸೌಲಭ್ಯದಲ್ಲಿ ತರಬೇತಿ ಪಡೆಯುವ ವ್ಯಕ್ತಿಯನ್ನು ತಾಲಿಬಾನ್‌ನಿಂದ ನೇಮಿಸಲಾಗಿದೆ. ಹಿಂದಿನ ಅಶ್ರಫ್ ಘನಿ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸಿದ ಹೆಚ್ಚಿನ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಅಫ್ಘಾನಿಸ್ತಾನದಿಂದ ಪಲಾಯನ ಮಾಡಿ ಜರ್ಮನಿ, ಟರ್ಕಿ, ಯುಕೆ ಮತ್ತು ಯುಎಸ್‌ನಂತಹ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. (ಏಜೆನ್ಸೀಸ್)