ತಾಲಿಬಾನ್ ಆಡಳಿತ ಸಮರ್ಥಿಸಿಕೊಂಡ ಪ್ರತಾಪಸಿಂಹ

Published on

ಮೈಸೂರು: ಬಿಜೆಪಿ ಕಾರ್ಯಕರ್ತರು ಮೈಮರೆತರೆ ಸಿದ್ದರಾಮಯ್ಯ ನೇತೃತ್ವದಲ್ಲಿ ತಾಲಿಬಾನ್ ಸರ್ಕಾರ ಬರುತ್ತದೆ ಎನ್ನುವ ಹೇಳಿಕೆಯನ್ನು ಸಂಸದ ಪ್ರತಾಪಸಿಂಹ ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಅಗಿದ್ದಾಗ ಪಿಎಫ್‌ಐ, ಕೆಎಫ್‌ಡಿಯ 1600 ಕಾರ್ಯಕರ್ತರ ಮೇಲೆ ಹೂಡಿದ್ದ 175 ಪ್ರಕರಣವನ್ನು ವಾಪಸ್ ಪಡೆದರು. ಮದುವೆ, ತಿಥಿ ಎಂದು ಮೈಸೂರಿಗೆ ನೂರಾರು ಬಾರಿ ಬಂದಿದ್ದ ಸಿದ್ದರಾಮಯ್ಯ ಭೀಕರವಾಗಿ ಹತ್ಯೆಯಾದ ಹಿಂದು ಕಾರ್ಯಕರ್ತ ಕ್ಯಾತಮಾರಹಳ್ಳಿ ರಾಜು ಮನೆಗೆ ಒಮ್ಮೆಯೂ ಹೋಗಿಲ್ಲ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದರು.
ಪೊಲೀಸರು ಬೇಡ ಎಂದರೂ ಕೇಸ್ ಹಿಂದಕ್ಕೆ ಪಡೆದಿದ್ದರಿಂದ ಹಿಂದುಗಳ ಹತ್ಯೆಯಾಯಿತು. ಇಂಥವರು ಅಧಿಕಾರಕ್ಕೆ ಬಂದಲ್ಲಿ ಕಪಾಲಿಬೆಟ್ಟ ತೆಗೆದು ಏಸುಬೆಟ್ಟ ಮಾಡುತ್ತಾರೆ. ಈ ಕಾರಣದಿಂದಲೇ ತಾಲಿಬಾನ್ ಸರ್ಕಾರದ ಬಗ್ಗೆ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ಮೋದಿ ಕೈ ಕೆಳಗೆ ಕೆಲಸ ಮಾಡಲು ನನಗೆ ಇಷ್ಟವಿದೆ. ಮೋದಿ ನನ್ನ ಪಾಲಿನ ದೇವರು. 15 ವರ್ಷಗಳಲ್ಲಿ ಒಬ್ಬ ಸಂಸದನಾಗಿ ಎಷ್ಟು ಕೆಲಸ ಮಾಡಬಹುದೋ ಅದನ್ನು ಮಾಡುತ್ತೇನೆ. ನಾನು ಲಾಂಗ್ ಟರ್ಮ್ ರಾಜಕಾರಣದ ಬಗ್ಗೆ ಯೋಚನೆ ಮಾಡಿಲ್ಲ. 2029ರ ಮುಂದೆ ರಾಜಕಾರಣದಲ್ಲಿ ಇರಬೇಕಾ ಅಥವಾ ಬೇಡವೇ ಎಂಬುದನ್ನು ಯೋಚನೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಎಸ್‌ವೈ ಶ್ರಮ ಇರಲಿದೆ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಹೊಂದಿದ್ದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ. ಸಿದ್ದರಾಮಯ್ಯ ಹಾಗೂ ಉಳಿದವರ ರಾಜಕಾರಣವನ್ನೆಲ್ಲಾ ಮುಗಿಸುವವರೆಗೂ ಅವರು ವಿಶ್ರಮಿಸುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಶ್ರಮ ಹಾಕುತ್ತಿದ್ದಾರೆ. ಈ ಬಾರಿ ಸಿದ್ದರಾಮಯ್ಯರಂಥವರು ಸೋತು ಮನೆಗೆ ಹೋಗುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net