ನವದೆಹಲಿ: ಅಫ್ಘಾನಿಸ್ತಾನವು ವಿಶ್ವ ಕ್ರಿಕೆಟ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ತಂಡಗಳಲ್ಲಿ ಒಂದಾಗಿದ್ದು, ಯುಎಸ್ಎ-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಬಲಿಷ್ಠ ತಂಡವನ್ನು ಮಣಿಸಿ ಸೆಮಿಫೈನಲ್ಗೇರುವಲ್ಲಿ ಯಶಸ್ವಿಯಾಗಿದ್ದ ಅಫ್ಘನ್ ತಂಡಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಸ್ವತಃ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವರೇ ಕರೆ ಮಾಡಿ ಆಟಗಾರರಿಗೆ ಅಭಿನಂದಿಸಿದ್ದರು. ಆದರೆ, ಇದೀಗ ತಾಲಿಬಾನ್ ಸರ್ಕಾರವು ತನ್ನ ದೇಶದಲ್ಲಿ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ತಯಾರಿ ನಡೆಸುತ್ತಿದೆ ಎಂಬ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದೆ.
ಈ ಬಗ್ಗೆ ಯಾವುದೇ ಮಾಹಿತಿ ಪ್ರಕಟವಾಗಿಲ್ಲವಾದರೂ ತಾಲಿಬಾನ್‌ನ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅವರು ದೇಶದಲ್ಲಿ ಕ್ರಿಕೆಟ್ ನಿಷೇಧಿಸಲು ಆದೇಶಿಸಿದ್ದಾರೆ. ಕ್ರಿಕೆಟ್ ಆಟವು ದೇಶದಲ್ಲಿ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತಿದೆ. ಅಲ್ಲದೆ ಈ ಆಟ ಷರಿಯಾ ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ ಈ ಆಟವನ್ನು ದೇಶದಲ್ಲಿ ನಿಷೇಧಿಸಲಾಗುತ್ತಿದೆ ಎಂದು ತಾಲಿಬಾನ್‌ನ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನನ್ನ ತಂದೆ ಹುಲಿ ಕೊಂದು ರಕ್ತ ಮುಖಕ್ಕೆ ಹಚ್ಚಿದರು! ಅದೇ ರೀತಿ… ತಮ್ಮ ಹೇಳಿಕೆ ಮೂಲಕವೇ ಸುದ್ದಿಯಾದ ಯುವರಾಜ್ ತಂದೆ ಯೋಗರಾಜ್
ಅಫ್ಘಾನಿಸ್ತಾನವು ಅಂತರರಾಷ್ಟ್ರೀಯ ಮತ್ತು ಇತರೆ ಲೀಗ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹಲವಾರು ಸ್ಟಾರ್ ಆಟಗಾರರನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು. ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ನವೀನ್-ಉಲ್-ಹಕ್ ಅವರಂತಹ ಆಟಗಾರರು ತಮ್ಮ ರಾಷ್ಟ್ರ ಮಾತ್ರವಲ್ಲದೇ ಬೇರೆ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತನ್ನ ದೇಶದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಂಗಣ ಇಲ್ಲದ ಕಾರಣ ಅಫ್ಘಾನಿಸ್ತಾನ ತಂಡವು ಭಾರತದ ಗ್ರೇಟರ್ ನೋಯ್ಡಾವನ್ನು ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ.
ವಾಸ್ತವವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ಮೊದಲಿಗೆ ಮಹಿಳಾ ಕ್ರಿಕೆಟ್ಗೆ ನಿಷೇಧ ಹೇರುವುದರ ಜೊತೆಗೆ ಮಹಿಳೆಯರು ಭಾಗವಹಿಸುವ ಎಲ್ಲಾ ಕ್ರೀಡೆಗಳಿಗೆ ತಾಲಿಬಾನ್ ಸರ್ಕಾರ ಬ್ರೇಕ್ ಹಾಕಿತ್ತು. ಇದೀಗ ಪುರುಷರ ಕ್ರಿಕೆಟ್ಗೂ ಫುಲ್ಸ್ಟಾಪ್ ಇಡಲು ಮುಂದಾಗಿದ್ದು, ತಾಲಿಬಾನ್ ಸರ್ಕಾರದ ಈ ನಡೆ ಕ್ರಿಕೆಟ್ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸರ್ಕಾರ ಹೇರಿರುವ ಈ ನಿಷೇಧವನ್ನು ಯಾವಾಗ ಮತ್ತು ಹೇಗೆ ಜಾರಿಗೊಳಿಸಲಾಗುವುದು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ, ಈ ವಿಚಾರವನ್ನು ತಳ್ಳಿ ಹಾಕುವಂತಿಲ್ಲ.