

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಎರಡೂವರೆ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಿಗೂಢ ಸಾವಿಗೆ ನಿಖರವಾದ ಕಾರಣಗಳು ಸಿಕ್ಕಿರಲಿಲ್ಲ. ತನಿಖೆ ಮಾಡಿದವರು ಇದು ಕೊಲೆ ಎಂದರೆ, ಸುಶಾಂತ್ ಕುಟುಂಬದವರು ಈ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇನ್ನೇನು ಪ್ರಕರಣ ಮುಚ್ಚಿ ಹೋಯಿತು ಎನ್ನುವಷ್ಟರಲ್ಲೇ ಒಂದು ಸ್ಫೋಟಕ ರಹಸ್ಯ ಬಯಲಾಗಿದೆ.
ಅಂದು ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಅವರ ಪೋಸ್ಟ್ ಮಾರ್ಟಂ ಮಾಡಿದ ತಂಡದಲ್ಲಿದ್ದ ವೈದ್ಯರೊಬ್ಬರು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಪೋಸ್ಟ್ ಮಾರ್ಟಂ ತಂಡದಲ್ಲಿ ರೂಪ್ಕುಮಾರ್ ಶಾ ಎನ್ನುವವರು ಸಹ ಇದ್ದರು. ಅವರೀಗ ಸುಶಾಂತ್ ಸಾವಿನ ರಹಸ್ಯವನ್ನು ಬಯಲು ಮಾಡಿದ್ದಾರೆ. 'ಅಂದು ಐದು ಶವಗಳು ಬಂದಿದ್ದವು. ಅದರಲ್ಲಿ ಒಂದು ವಿಐಪಿ ಶವವಾಗಿತ್ತು. ನಾವು ಆಟೋಪ್ಸಿ ಮಾಡುವುದಕ್ಕೆ ಹೋದಾಗ, ಅದು ಸುಶಾಂತ್ ಸಿಂಗ್ ಎಂದು ಗೊತ್ತಾಯಿತು. ಅವರ ದೇಹತ ಮೇಲೆ, ಅದರಲ್ಲೂ ಕುತ್ತಿಗೆಯ ಬಳಿ ಎರಡ್ಮೂರು ಗುರುತುಗಳು ಇದ್ದವು. ಇಂಥ ಪ್ರಕರಣಗಳಲ್ಲಿ ನಾವು ಪೋಸ್ಟ್ ಮಾರ್ಟಂ ರೆಕಾರ್ಡ್ ಮಾಡಿಕೊಳ್ಳಬೇಕು. ಆದರೆ, ನಮ್ಮ ಉನ್ನತ ಅಧಿಕಾರಿಗಳು, ಕೆಲವು ಫೋಟೋಗಳು ಮಾತ್ರ ಸಾಕು ಎಂದರು. ನಾವು ಅದರ ಪ್ರಕಾರ ಕೆಲವು ಫೋಟೋಗಳನ್ನು ಮಾತ್ರ ಕ್ಲಿಕ್ಕಿಸಿದೆವು' ಎಂದಿದ್ದಾರೆ ರೂಪ್ಕುಮಾರ್ ಶಾ.
ಸುಶಾಂತ್ ಸಿಂಗ್ ಅವರ ದೇಹವನ್ನು ನೋಡುತ್ತಿದ್ದಂತೆಯೇ, ಇದು ಆತ್ಮಹತ್ಯಯಲ್ಲ ಕೊಲೆ ಎಂದು ರೂಪ್ಕುಮಾರ್ ಹೇಳಿದ್ದರಂತೆ. 'ನಾನು ಬಾಡಿ ನೋಡುತ್ತಿದ್ದಂತೆಯೇ ನನ್ನ ಸೀನಿಯರ್ಗಳಿಗೆ ಇದು ಕೊಲೆ ಎಂದು ಹೇಳಿದೆ. ಅಷ್ಟೇ ಅಲ್ಲ, ನಿಯಮಾನುಸಾರ ಕೆಲಸ ಮಾಡಬೇಕು ಎಂದೆ. ಆದರೆ, ನಮ್ಮ ಮೇಲಧಿಕಾರಿಗಳು ಮಾತ್ರ ಬೇಗ ಒಂದಿಷ್ಟು ಫೋಟೋ ತೆಗೆದುಕೊಂಡು ಪೊಲೀಸರಿಗೆ ಹೆಣ ಕೊಡಿ ಎಂದು ಹೇಳಿದರು. ಅದರಂತೆ ನಾವು ಅವತ್ತೇ ರಾತ್ರಿ ಪೋಸ್ಟ್ ಮಾರ್ಟಂ ಮಾಡಿಬಿಟ್ಟೆವು' ಎಂದು ಅವರು ಹೇಳಿದ್ದಾರೆ.