More

    ಕಲಾವಿದೆಯಾಗಿ ನಾನು ಚೌಕಟ್ಟಿಗೆ ಒಳಪಡಲ್ಲ: ಭಾವನಾ..

    ನಟಿ ಭಾವನಾ 2016ರಲ್ಲಿ ಬಿಡುಗಡೆಯಾದ ‘ನಿರುತ್ತರ’ ಚಿತ್ರದ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ ಆರು ವರ್ಷಗಳ ನಂತರ ಮತ್ತೆ ಹಿರಿತೆರೆಗೆ ವಾಪಸ್ಸಾಗಿರುವ ಅವರು ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಬ್ರೇಕ್ ಬಗ್ಗೆ ಹಾಗೂ ತಮ್ಮ ಪಾತ್ರದ ಕುರಿತು ಭಾವನಾ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    ‘ನಿರುತ್ತರ’ ಚಿತ್ರದ ಬಳಿಕ ಆರು ವರ್ಷಗಳ ಬ್ರೇಕ್ ತೆಗೆದುಕೊಳ್ಳಲು ಕಾರಣ?

    – ಆರು ವರ್ಷಗಳಾಗಿದ್ಯಾ? ನೋಡಿ ನನಗೇ ಗೊತ್ತಾಗಿಲ್ಲ. ಇಷ್ಟು ವರ್ಷ ಸುಮ್ಮನೇ ವೇಸ್ಟ್ ಆಗಿ ಹೋಯಿತಲ್ಲಾ. ಅಂದಹಾಗೆ, ಈ ಬ್ರೇಕ್ ನಾನಾಗಿಯೇ ತೆಗೆದುಕೊಂಡಿದ್ದಲ್ಲ. ನಾನು ಯಾವಾಗಲೂ ಕೆಲಸ ಮಾಡಬೇಕು ಅಂತ ಅಂದುಕೊಳ್ಳುತ್ತೇನೆ. ಈ ಸಮಯದಲ್ಲಿ ಎರಡು, ಮೂರು ಕಥೆಗಳು ಬಂದಿದ್ದವು. ಆದರೆ, ಕಾರಣಾಂತರಗಳಿಂದ ಅವು ಟೇಕಾಫ್ ಆಗಲಿಲ್ಲ.

    ‘… ಜಮಾಲಿಗುಡ್ಡ’ ಚಿತ್ರತಂಡ ಸೇರಿಕೊಂಡಿದ್ದು ಹೇಗೆ?

    – ಚಿತ್ರ ಪ್ರಾರಂಭದ ಹಂತದಲ್ಲಿದ್ದಾಗ ನಾಯಕನ ಪಾತ್ರಕ್ಕೆ ಧನಂಜಯ ಅವರ ಆಯ್ಕೆಯಾಗಿತ್ತಷ್ಟೇ. ಉಳಿದ ಯಾವ ಪಾತ್ರಕ್ಕೂ ಆಯ್ಕೆಯಾಗಿರಲಿಲ್ಲ. ಅದೇ ಸಮಯದಲ್ಲಿ ಸಂಭಾಷಣೆಕಾರ ಮಾಸ್ತಿ ಅವರು ನಿರ್ದೇಶಕ ಕುಶಾಲ್ ಗೌಡ ಅವರಿಗೆ ನನ್ನ ಬಗ್ಗೆ ಹೇಳಿದ್ದರು. ನನಗೆ ಕುಶಾಲ್ ಚಿತ್ರದ ಬಗ್ಗೆ ಹೇಳಿದರು. ಮೊದಲು ನಾನು ಒಪ್ಪಿಕೊಳ್ಳುತ್ತೀನಾ, ಇಲ್ಲವಾ ಎಂಬ ಗೊಂದಲ ಅವರಲ್ಲೂ ಇತ್ತು. ಉತ್ತರ ಭಾರತದಿಂದ ವಲಸೆ ಬಂದಿರುವ ಮಹಿಳೆಯ ಪಾತ್ರ ಅಂತಷ್ಟೇ ಹೇಳಿದ್ದರು.

    ನಿಮ್ಮ ‘ಪಾಯಲ್’ ಪಾತ್ರದ ಬಗ್ಗೆ …

    – ಪಾಯಲ್ ಜಟಿಲವಾದ ಪಾತ್ರ. ಇಮೇಜ್ ಬಗ್ಗೆ ತಲೆಕೆಡಿಸಿಕೊಳ್ಳುವವರಿಗೆ ಆ ಪಾತ್ರದಲ್ಲಿ ನಟಿಸುವುದು ಕಷ್ಟ ಆಗಬಹುದು. ಆದರೆ, ಕಲಾವಿದೆ ಅಂತ ಬಂದಾಗ ನಾನು ಯಾವುದೇ ಚೌಕಟ್ಟಿಗೆ ಒಳಪಡುವುದಿಲ್ಲ. ಯಾವುದೇ ಪಾತ್ರಕ್ಕೂ ನಾನು ಮಾನಸಿಕವಾಗಿ ಸಿದ್ಧಳಿರುತ್ತೇನೆ. ಕುಶಾಲ್ ತುಂಬ ಸೂಕ್ಷ್ಮತೆಯಿಂದ ನನ್ನ ಪಾತ್ರವನ್ನು ಸೆರೆಹಿಡಿದಿದ್ದಾರೆ. ಜನ ನನ್ನ ಪಾತ್ರವನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬ ಕುತೂಹಲ ಇದೆ. ನನ್ನ ಮಟ್ಟಿಗೆ ಇದೊಂದು ಚಾಲೆಂಜಿಂಗ್ ರೋಲ್.

    ಧನಂಜಯ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

    – ಧನಂಜಯ ಜತೆ ಒಂದು ಸಣ್ಣ ಸೀನ್​ನಲ್ಲಿ ಮಾತ್ರ ತೆರೆ ಹಂಚಿಕೊಂಡಿದ್ದೇನೆ. ನಮ್ಮ ಪಾತ್ರಗಳ ನಡುವೆ ವಾಕ್ಸಮರದ ರೀತಿಯಿದ್ದಿದ್ದರೆ ಇನ್ನೂ ಮಜಾ ಇರುತ್ತಿತ್ತು. ಅವರನ್ನು ಹತ್ತಿರದಿಂದ ನೋಡುವ ಅವಕಾಶ ದೊರೆಯಿತು. ತುಂಬ ಜನ ಅವರು ಸರಳ ವ್ಯಕ್ತಿ ಅಂತ ಹೇಳಿದ್ದರು, ಅದರ ಅನುಭವ ನನಗೆ ಸೆಟ್​ನಲ್ಲಿ ಸಿಕ್ಕಿತು.ಅವರ ಜತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು.

    ಸಿನಿಮಾ ಇದೇ ಡಿ. 30ರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಕಮ್​ಬ್ಯಾಕ್ ಚಿತ್ರ ಕೂಡ…

    – ಸಂಭಾಷಣೆಕಾರ ಮಾಸ್ತಿ, ನಿರ್ದೇಶಕ ಕುಶಾಲ್, ಛಾಯಾಗ್ರಾಹಕ ಕಾರ್ತಿಕ್ ಮತ್ತು ನಿರ್ವಪಕರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಕನ್ನಡ ಸಿನಿಮಾಗಳು ಬೆಳೆಯುತ್ತಿವೆ. ಭಾರತದಾದ್ಯಂತ ಜನ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ. ‘ಜಮಾಲಿಗುಡ್ಡ’ ಸಹ ತಾಂತ್ರಿಕವಾಗಿ ಒಳ್ಳೆಯ ಸಿನಿಮಾ. ಪ್ರೇಕ್ಷಕರು, ಅಭಿಮಾನಿಗಳು ಇಷ್ಟಪಡಬೇಕೆಂದು ನಾವು ಸಿನಿಮಾ ಮಾಡುತ್ತೇವೆ. ಪ್ರತಿಯೊಂದು ಪಾತ್ರದಲ್ಲೂ ನನ್ನನ್ನು ಸ್ವೀಕರಿಸಿದ್ದಾರೆ. ಈ ಸಿನಿಮಾದಲ್ಲಿ ಹೇಗೆ ಸ್ವೀಕರಿಸುತ್ತಾರೋ? ಎಂಬ ಕುತೂಹಲವಿದೆ. ಆದರೆ, ಅವರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ನನಗಿದೆ.

    ಮತ್ತೆ ಬ್ರೇಕ್ ತೆಗೆದುಕೊಳ್ಳುತ್ತೀರಾ? ನಟನೆ ಮುಂದುವರಿಸುತ್ತೀರಾ?

    – ನಾನು ಜೀವನದಲ್ಲಿ ಯಾವಾಗಲೂ ಎಕ್ಸೈಟ್ ಆಗಿರುತ್ತೇನೆ. ಸಿನಿಮಾಗಳ ವಿಷಯದಲ್ಲಿ ಆ ಎಕ್ಸೈಟ್​ವೆುಂಟ್ ಕೊಂಚ ಹೆಚ್ಚು. ಈಗಂತೂ ದೈಹಿಕವಾಗಿ, ಮಾನಸಿಕವಾಗಿ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲು ಹಿಂದೆಂದಿಗಿಂತ ಸಿದ್ಧಳಿದ್ದೇನೆ. ಒಳ್ಳೆಯ ಪಾತ್ರಗಳಿಗೆ ಕಾಯುತ್ತಿದ್ದೇನೆ. ಕಥೆ, ಪಾತ್ರ ಇಷ್ಟವಾದರೆ ಖಂಡಿತವಾಗಲೂ ನಟಿಸುತ್ತೇನೆ.

    ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts