ಬಿಡುಗಡೆಯಾದ ಒಂದೇ ವಾರಕ್ಕೆ ಓಟಿಟಿಯಲ್ಲಿ ಬಂತು ವಿನಯ್​ ರಾಜಕುಮಾರ್​ ಅಭಿನಯದ 'ಟೆನ್​'

10 - Vinay Rajkumar
Published on

ಬೆಂಗಳೂರು: 'ಅನಂತು ವರ್ಸಸ್​ ನುಸ್ರತ್​' ಚಿತ್ರ ಬಿಡಗುಡೆಯಾಗಿ ನಾಲ್ಕು ವರ್ಷಗಳಾದರೂ, ವಿನಯ್​ ರಾಜಕುಮಾರ್​ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಹೀಗಿರುವಾಗಲೇ, ವಿನಯ್​ ಅಭಿನಯದ 'ಟೆನ್​' ಚಿತ್ರವು ಕಳೆದ ವಾರವಷ್ಟೇ ಚಿತ್ರಮಂದಿರಗಳಲ್ಲಿ ಬಿಡುಡೆಯಾಗಿತ್ತು. ಅದಾಗಿ ಒಂದು ವಾರದಲ್ಲಿ ಚಿತ್ರವು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿದೆ.

'ಟೆನ್​', ಕರೊನಾಗೂ ಮುಂಚೆ ಪ್ರಾರಂಭವಾದ ಚಿತ್ರ. ಸಾಕಷ್ಟು ವಿಳಂಬವಾದ ನಂತರ ಚಿತ್ರವು ಕೊನೆಗೂ ಡಿ.16ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಅದೇ ದಿನ 9 ಚಿತ್ರ ಬಿಡುಗಡೆಯಾದ್ದರಿಂದ, 'ಟೆನ್​' ಬಂದಿದ್ದು, ಹೋಗಿದ್ದು ಯಾವುದೂ ಗೊತ್ತಾಗಲಿಲ್ಲ. ಈಗ ಚಿತ್ರವು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿ, ಸ್ಟ್ರೀಮ್​ ಆಗುತ್ತಿದೆ.

ಇಷ್ಟಕ್ಕೂ 'ಟೆನ್​' ಎಂದರೇನು? ಎಂಬ ಪ್ರಶ್ನೆ ಬರಬಹುದು. ಬಾಕ್ಸಿಂಗ್​ನಲ್ಲಿ ಈ ಸಂಖ್ಯೆಗೆ ಬಹಳ ಮಹತ್ವವಿದ್ದು, ಒಬ್ಬ ಆಟಗಾರ ಪೆಟ್ಟು ತಿಂದು ನೆಲಕ್ಕೆ ಬಿದ್ದಾಗ, ಅವನು ಪುನಃ ಏಳುವುದಕ್ಕೆ 10 ಎಣಿಸಲಾಗುತ್ತದೆ. ಅದನ್ನೇ ಈ ಚಿತ್ರಕ್ಕೆ ಶೀರ್ಷಿಕೆಯನ್ನಾಗಿ ಇಡಲಾಗಿದೆ. ಈ ಚಿತ್ರದಲ್ಲಿ ವಿನಯ್​ ರಾಜಕುಮಾರ್​ ಬಾಕ್ಸರ್​ ಆಗಿ ಅಭಿನಯಿಸಿದ್ದಾರೆ. ಈ ಹಿಂದೆ, 'ಉಳಿದವರು ಕಂಡಂತೆ', 'ಕಿರಿಕ್​ ಪಾರ್ಟಿ' ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಕರಮ್​, '10' ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.

'10' ಚಿತ್ರದಲ್ಲಿ ವಿನಯ್​ ರಾಜಕುಮಾರ್​ಗೆ ನಾಯಕಿಯಾಗಿ ಅನೂಷಾ ರಂಗನಾಥ್​ ನಟಿಸಿದ್ದು, ಮಿಕ್ಕಂತೆ ಗೋಪಾಲಕೃಷ್ಣ ದೇಶಪಾಂಡೆ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net