ವಿರಾಟ್​ ಕೊಹ್ಲಿಯಂತ ಕ್ರಿಕೆಟಿಗ ಮತ್ತೊಬ್ಬನ್ನಿಲ್ಲ! 'ರನ್​ಮಷಿನ್'​ ಹಾಡಿ ಹೊಗಳಿದ ಮಾಜಿ ಸಿಎಸ್​ಕೆ ಆಟಗಾರ | Virat Kohli

ವಿಜಯವಾಣಿ (95)
Published on

Virat Kohli: ನಿನ್ನೆ (ಏಪ್ರಿಲ್​ 27) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪ್ರಸಕ್ತ ಐಪಿಎಲ್​ ಟೂರ್ನಿಯ 46ನೇ ಪಂದ್ಯದಲ್ಲಿ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಮತ್ತು ಆಲ್​ರೌಂಡರ್​ ಕೃನಾಲ್ ಪಾಂಡ್ಯ ನಡುವಿನ 100ಕ್ಕೂ ಅಧಿಕ ರನ್​ಗಳ ಅಮೋಘ ಜತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ ಗೆದ್ದು ಬೀಗಿತು. ಈ ಮೂಲಕ ಐಪಿಎಲ್​ ಅಂಕಪಟ್ಟಿಯಲ್ಲಿ ಚಾಲೆಂಜರ್ಸ್​ ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಕೆಎಲ್ ರಾಹುಲ್ (41) ಮತ್ತು ಸ್ಟಬ್ಸ್ (34) ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ 18.3 ಓವರ್‌ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಗುರಿಯನ್ನು ಬೆನ್ನಟ್ಟಿ ಜಯಭೇರಿ ಬಾರಿಸಿತು. ವಿರಾಟ್ ಕೊಹ್ಲಿ (51) ಮತ್ತು ಕೃನಾಲ್​ ಪಾಂಡ್ಯ (ಅಜೇಯ 73) ಅದ್ಭುತ ರನ್ ಗಳಿಸುವ ಮೂಲಕ ಆರ್‌ಸಿಬಿ ಕೇವಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸುಲಭವಾಗಿ ಪಂದ್ಯವನ್ನು ಗೆದ್ದು ಬೀಗಿತು. ಕಳೆದ ಪಂದ್ಯಗಳಲ್ಲಿ ಸತತವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್​ಗೆ ಮಾಜಿ ಕ್ರಿಕೆಟಿಗರಿಂದ ಮೆಚ್ಚುಗೆಗಳು ಹರಿದುಬರುತ್ತಿದ್ದು, ಇದೀಗ ಸಿಎಸ್​ಕೆ ಮಾಜಿ ಆಟಗಾರ ವಿರಾಟ್​ರನ್ನು ಗುಣಗಾನ ಮಾಡಿದ್ದಾರೆ.

ವಿರಾಟ್​ ಆರ್ಭಟಕ್ಕೆ ತಡೆ ಇಲ್ಲ

ಐಪಿಎಲ್​ 18ನೇ ಆವೃತ್ತಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ, 10 ಪಂದ್ಯಗಳಲ್ಲಿ ಬರೋಬ್ಬರಿ 443 ರನ್​ ಗಳಿಸಿದ್ದಾರೆ. ಆರು ಸ್ಫೋಟಕ ಅರ್ಧಶತಕ ಗಳಿಸಿರುವ ಕೊಹ್ಲಿ, ರನ್​ ಚೇಸಿಂಗ್​ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮೊಂದಿಗೆ ಓಪನಿಂಗ್​ ಬರುವ ಫಿಲ್​ ಸಾಲ್ಟ್​ ಸರಿಯಾದ ಸಾಥ್​ ನೀಡದೆ ಹೋದರೂ ತಮ್ಮ ಆಟವನ್ನು ವಿರಾಟ್​ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಸದ್ಯ ಇದೇ ಟೀಮ್ ಇಂಡಿಯಾ ಮತ್ತು ಸಿಎಸ್​ಕೆ ಮಾಜಿ ಆಲ್​ರೌಂಡರ್​ ಸುರೇಶ್​ ರೈನಾ ಮೆಚ್ಚುಗೆಗೆ ಕಾರಣವಾಗಿದೆ.

ಕೃನಾಲ್​ ಪಾಂಡ್ಯಗೂ ಮೆಚ್ಚುಗೆ

"ಕೊಹ್ಲಿಯಂತೆ ಮತ್ತೊಬ್ಬ ಕ್ರಿಕೆಟಿಗ ಇಲ್ಲವೇ ಇಲ್ಲ. ಚೇಸಿಂಗ್​ನಲ್ಲಿ ಅತ್ಯುತ್ತಮ. ವಿರಾಟ್​ ಒಬ್ಬ ಅದ್ಭುತ ಚೇಸ್ ಮಾಸ್ಟರ್​. ವಿರಾಟ್​ ಫಿಟ್ನೆಸ್​ಗೆ ಕೃನಾಲ್​ ಪಾಂಡ್ಯ ಜೊತೆಯಾದರು. ರನ್​ ಗಳಿಸುವ ವಿಷಯದಲ್ಲಿ ಇವರಿಬ್ಬರು ಉತ್ತಮವಾಗಿ ಕಂಡುಬಂದರು. ಇಲ್ಲಿ ಕೃನಾಲ್​ರನ್ನು ಮೆಚ್ಚಬೇಕು. ಅವರ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ವಿರಾಟ್​ರನ್ನು ಆ ಬದಿಯಲ್ಲಿ ಸುಧಾರಿಸಿಕೊಳ್ಳಲು ಅವಕಾಶ ನೀಡಿದ ಪಾಂಡ್ಯ, ತಾವು ಬೌಲರ್​ಗಳನ್ನು ಜಾಡಿಸುವಲ್ಲಿ ಮುಂದಾದರು. ಕಾದು ಆಡಿದ ರೀತಿ ನಿಜಕ್ಕೂ ಮೆಚ್ಚುವಂತದ್ದು. ಎಲ್ಲಾ ವಿಭಾಗಗಳಲ್ಲಿಯೂ ಆರ್​ಸಿಬಿ ಬಲಿಷ್ಠವಾಗಿ ಕಾಣಿಸುತ್ತಿದೆ" ಎಂದು ರೈನಾ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net