ಲೋಕಸಭೆ ಚುನಾವಣೆ; ಕುತೂಹಲ ಮೂಡಿಸಿದ ಡಿ.ಕೆ. ಶಿವಕುಮಾರ್​-ಸೂರಜ್​ ರೇವಣ್ಣ ಭೇಟಿ

Suraj Shivakumar
Published on

ಬೆಂಗಳೂರು: ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಸಿದ್ಧತೆಯನ್ನು ಆರಂಭಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್​ ಈ ಬಾರಿ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಕಣಕ್ಕಿಳಿಯುತ್ತಿವೆ. ಆದರೆ, ಮಹತ್ವದ ಬೆಳವಣಿಗೆ ಒಂದರಲ್ಲಿ ಜೆಡಿಎಸ್​ನ ವಿಧಾನಪರಿಷತ್​ ಸದಸ್ಯ ಸೂರಜ್​ ರೇವಣ್ಣ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್​ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಬೆಳಿಗ್ಗೆ ಬಂದ ಸೂರಜ್‌ ಜೊತೆ ಶಿವಕುಮಾರ್‌ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಸೂರಜ್​ ಡಿ.ಕೆ. ಶಿವಕುಮಾರ್​ ಅವರನ್ನು ಯಾವ ಕಾರಣಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬುದರ ಕುರಿತು ಈವರೆಗೆ ಬಹಿರಂಗಗೊಂಡಿಲ್ಲ.

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಜೊತೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಯಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ಸೂರಜ್‌ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸೂರಜ್​ ರೇವಣ್ಣ ಸ್ಪಷ್ಟನೆ

ಡಿ.ಕೆ. ಶಿವಕುಮಾರ್​ ಭೇಟಿ ಬಳಿಕ ಮಾತನಾಡಿದ ಸೂರಜ್​ ರೇವಣ್ಣ, ಒಬ್ಬ ಚುನಾಯಿತ ಪ್ರತಿನಿಧಿಯಾಗಿರುವ ನಾನು ಜಿಲ್ಲೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಅವರನ್ನು ಭೇಟಿ ಮಾಡಿದೆ. ತಮ್ಮ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net