'ನಾಚಿಕೆಯಾಗಬೇಕು ಕಾಂಗ್ರೆಸ್​ಗೆ…' ಲೋಕಸಭಾ ಟಿಕೆಟ್ ಬೆನ್ನಲ್ಲೇ ಕಂಗನಾ ವಿರುದ್ಧ ಸುಪ್ರಿಯಾ ಅವಹೇಳನಕಾರಿ ಪೋಸ್ಟ್!

WhatsApp-Image-2024-03-26-at-8.42.04-AM
Published on

ನವದೆಹಲಿ: ಬಾಲಿವುಡ್​ನ ಹಾಟ್​ ಬೆಡಗಿ, ನಟಿ ಕಂಗನಾ ರಣಾವತ್ ಸದ್ಯ ಇಷ್ಟು ದಿನ ತಮ್ಮ ಸಿನಿಮಾಗಳ ಮೂಲಕ, ಉಡುಗೆ, ವಿಭಿನ್ನ ಹೇಳಿಕೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದರು. ಆದರೆ, ಇದೀಗ ಪ್ರಥಮ ಬಾರಿಗೆ ಚುನಾವಣೆಗೆ ಕಣಕ್ಕಿಳಿದಿದ್ದು, ಬಿಜೆಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಿಂದ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುವ ಮುನ್ನವೇ ನಟಿಯ ವಿರುದ್ಧ ಅಪಸ್ವರ ಕೇಳಿಬಂದಿದೆ. ಈ ಮೂಲಕ ಇದೀಗ ಮತ್ತೊಮ್ಮೆ ನಟಿ ಸುದ್ದಿಯಲ್ಲಿದ್ದಾರೆ. 

ಕಂಗನಾ ಪ್ರಚಾರ ಕೈಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನೇಟ್, ಈ ಹಿಂದೆ ಕಂಗನಾ ಹಂಚಿಕೊಂಡಿದ್ದ ಬೋಲ್ಡ್ ಫೋಟೋವೊಂದನ್ನು ಪೋಸ್ಟ್​ ಮಾಡಿ, ಅದರ ಮೇಲೆ ತಮ್ಮದೊಂದು ಅನಿಸಿಕೆ ವ್ಯಕ್ತಪಡಿಸಿದ್ದರು. ಸುಪ್ರಿಯಾ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದಂತೆ ಗಮನಹರಿಸಿದ ಕಂಗನಾ, ಸದ್ಯ ಈ ವಿವಾದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಚೊಚ್ಚಲ ಚುನಾವಣಾ ಪ್ರಚಾರದ ಕುರಿತು ಕಾಂಗ್ರೆಸ್ ನಾಯಕಿ ಮಾಡಿದ ಅವಹೇಳನಕಾರಿ ಸದ್ಯ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ರಾಜಕಾರಣಿ ಸುಪ್ರಿಯಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನೇಟ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕಂಗನಾರ ಹಾಟ್​ ಫೋಟೋದೊಂದಿಗೆ ಕೆಟ್ಟದಾಗಿ ಬರೆದು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕಂಗನಾ ಕೂಡ ಭಾರೀ ಅಸಮಾಧಾನ ವ್ಯಕ್ತಡಿಸುವುದರ ಜತೆಗೆ ವಾಗ್ದಾಳಿ ನಡೆಸಿದರು.

ಈ ವಿಚಾರ ತೀವ್ರವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಸ್ಪಷ್ಟನೆ ನೀಡಿದ್ದು, "ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರ ಬಗ್ಗೆ ನನ್ನ ಖಾತೆಯಿಂದ ಬಂದಿರುವ ಪೋಸ್ಟ್​ ನಾನು ಮಾಡಿರುವುದಿಲ್ಲ. ಹಲವು ಜನರು ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ಅವಕಾಶವಿದೆ. ಅವರಲ್ಲಿ ಯಾರೋ ಈ ರೀತಿ ಅನುಚಿತ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದಿಲ್ಲ. ಇದು ನನ್ನ ಗಮನಕ್ಕೆ ಬಂದ ತಕ್ಷಣ, ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದೇನೆ" ಎಂದಿದ್ದಾರೆ.

"ನನ್ನನ್ನು ಆತ್ಮೀಯವಾಗಿ. ಹತ್ತಿರದಿಂದ ತಿಳಿದಿರುವ ಪ್ರತಿಯೊಬ್ಬರಿಗೂ ನಾನು ಮಾಡಿದ್ದೀನಾ, ಇಲ್ವಾ? ಎಂಬುದು ಚೆನ್ನಾಗಿ ತಿಳಿದಿದೆ. ಯಾವುದೇ ಮಹಿಳೆಯ ಬಗ್ಗೆ ವೈಯಕ್ತಿಕ ಮತ್ತು ಅಸಭ್ಯ ಕಾಮೆಂಟ್‌ಗಳನ್ನು ಎಂದಿಗೂ ಮಾಡಬೇಡಿ. ಇದು ಹೇಗೆ ಸಂಭವಿಸಿತು ಎಂದು ನಾನು ತಿಳಿಯಲು ಬಯಸುತ್ತೇನೆ. ಟ್ವಿಟರ್‌ನಲ್ಲಿ ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಸುಪ್ರಿಯಾ ಪರೋಡಿ ಎಂಬ ಹೆಸರಿನ ಅಣಕ ಖಾತೆಯನ್ನು ನಡೆಸಲಾಗುತ್ತಿದೆ ಎಂದು ನನಗೆ ತಿಳಿದಿತ್ತು" ಎಂದರು.

"ಯಾರೋ ಈ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾರೆ. ಅದನ್ನು ಯಾರೋ ಕಾಪಿ ಮಾಡಿ, ಅಲ್ಲಿಂದ ನನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಅಕೌಂಟ್​ಗೆ ಆ್ಯಕ್ಸೆಸ್​ ಹೊಂದಿರುವವರೇ ಈ ಕೆಲಸವನ್ನು ಮಾಡಿದ್ದಾರೆ. ಅದು ಯಾರೆಂದು ತಿಳಿಯಲು ಪ್ರಯತ್ನಿಸುತ್ತಿದ್ದೇನೆ. ನಾನು ಆ ಖಾತೆ ಕುರಿತು ಟ್ವಿಟರ್‌ಗೆ ರಿಪೋರ್ಟ್​ ಮಾಡಿದ್ದೇನೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net