More

    ವೆಬ್​ಕಾಸ್ಟಿಂಗ್​ನಲ್ಲಿ ಪರೀಕ್ಷಾ ಅಕ್ರಮ ಬಯಲು!: ಎಸ್​ಎಸ್​ಎಲ್​ಸಿ ಎಕ್ಸಾಂ ಇಬ್ಬರು ಶಿಕ್ಷಕರು ಅಮಾನತು, ವಿದ್ಯಾರ್ಥಿ ಡಿಬಾರ್

    ಬೆಂಗಳೂರು: ರಾಜ್ಯಾದ್ಯಂತ ಸೋಮವಾರ ಆರಂಭವಾದ ಎಸ್​ಎಸ್​ಎಲ್​ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ನಕಲು ಮಾಡಲು ಸಹಕರಿಸಿದ ಆರೋಪದಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಅಕ್ರಮದಲ್ಲಿ ತೊಡಗಿದ್ದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ. ಉಳಿದೆಡೆ, ಪರೀಕ್ಷೆ ಸುಸೂತ್ರವಾಗಿ ನಡೆದಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

    ಪರೀಕ್ಷೆಗೆ ಇದೇ ಮೊದಲ ಬಾರಿಗೆ ವೆಬ್​ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದರ ಆಧಾರದಲ್ಲಿ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಏವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸಾಹೇಬಗೌಡ ಉಕ್ಕಾಲಿ ಹಾಗೂ ಝುಂಡದಕೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಹಣಮಂತರಾಯ ಎಂಬುವರನ್ನು ಅಮಾನತು ಮಾಡಲಾಗಿದೆ.

    ವೆಬ್​ಕಾಸ್ಟಿಂಗ್​ಗಾಗಿ ಅಳವಡಿಸಿರುವ ಸಿಸಿ ಕ್ಯಾಮರಾವನ್ನು ಯಾದಗಿರಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ವೀಕ್ಷಣೆ ಮಾಡುವ ವೇಳೆ ಈ ಇಬ್ಬರೂ ಶಿಕ್ಷಕರು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೊಠಡಿಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡುಬಂದಿದೆ. ಆದರೂ ಶಿಕ್ಷಕರು ಕ್ರಮಕ್ಕೆ ಮುಂದಾಗಿರಲಿಲ್ಲ. ಅದನ್ನು ಮುಖ್ಯ ಅಧೀಕ್ಷಕರ ಗಮನಕ್ಕೂ ತಂದಿಲ್ಲ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಪಂ ಸಿಇಒ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿರುವ ಮೇರೆಗೆ ಯಾದಗಿರಿ ಡಿಡಿಪಿಐ ಅಮಾನತುಗೊಳಿಸಿದ್ದಾರೆ.

    ಸಂಬಂಧಪಟ್ಟ ಶಾಲೆಗಳಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಉಪನಿರ್ದೇಶಕರು ನೀಡುವ ವರದಿಯ ಆಧಾರದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ. ಇನ್ನು ವಿಜಯಪುರದಲ್ಲಿ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ವಿದ್ಯಾರ್ಥಿಯೊಬ್ಬನನ್ನು ಡಿಬಾರ್ ಮಾಡಲಾಗಿದೆ.

    ಪ್ರಥಮ ಭಾಷೆ ಕನ್ನಡಕ್ಕೆ ನೋಂದಣಿ ಮಾಡಿಕೊಂಡಿದ್ದ 8,34,811 ವಿದ್ಯಾರ್ಥಿಗಳಲ್ಲಿ 8,32,343 (ಶೇ.98.41) ಮಂದಿ ಹಾಜರಾಗಿದ್ದು, 13,468 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಮಂಡಳಿ ಮಾಹಿತಿ ನೀಡಿದೆ. ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.

    ಪರೀಕ್ಷೆ ಬರೆದ ತಾಯಿ-ಮಗ: ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ತಾಯಿ ಗಂಗಮ್ಮ ಮತ್ತು ಮಗ ಮಲ್ಲಿಕಾರ್ಜುನ ಒಟ್ಟಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.

    ಸಾವಿರಾರು ಅಂಗವಿಕಲರು ಭಾಗಿ: ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ವಿಷಯಕ್ಕೆ ನೋಂದಣಿಯಾದ 54,254 ಅಂಗವಿಕಲ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಅನುತ್ತೀರ್ಣರಾದ, 9ನೇ ತರಗತಿ ಪಾಸಾದ ವಿದ್ಯಾರ್ಥಿ ಗಳ ಸಹಾಯ ಪಡೆದು ಪರೀಕ್ಷೆ ಎದುರಿಸಲು ಅವಕಾಶ ವಿತ್ತು. ರಾಜ್ಯದ ಎಲ್ಲ ಅಂಗವಿಕಲ ವಿದ್ಯಾರ್ಥಿಗಳಿಗೆ ನೆಲಮಹಡಿಯಲ್ಲೇ 990ಕ್ಕೂ ಅಧಿಕ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥಿತವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಅಲ್ಲದೆ, 1 ಗಂಟೆ ಹೆಚ್ಚುವರಿ ಸಮಯ ಕೂಡ ನೀಡಿದ್ದರಿಂದ ಅವರೆಲ್ಲರೂ ಸಂತಸದಿಂದ ಪರೀಕ್ಷೆ ಎದುರಿಸಿದರು. ವಿವಿಧ ಕಾರಣಕ್ಕೆ ಸಾವಿರಾರು ಅಂಗವಿಕಲ ವಿದ್ಯಾರ್ಥಿಗಳು ಗೈರಾಗಿದ್ದರು.

    ಪ್ರಶ್ನೆಪತ್ರಿಕೆ ಸೋರಿಕೆ?: ರಾಯಚೂರು: ಕನ್ನಡ ಪ್ರಶ್ನೆಪತ್ರಿಕೆ ಸೋಮವಾರ ಸೋರಿಕೆ ಆಗಿದೆ ಎಂಬ ಮಾತುಗಳು ಮುದಗಲ್ ಪಟ್ಟಣದಲ್ಲಿ ಕೇಳಿಬಂದವು. ಪರೀಕ್ಷೆ ಆರಂಭವಾದ ಒಂದು ತಾಸಿನಲ್ಲಿ ಕನ್ನಡ ಪ್ರಶ್ನೆಪತ್ರಿಕೆ ಪಟ್ಟಣದ ಅನೇಕರ ಮೊಬೈಲ್​ನಲ್ಲಿ ಹರಿದಾಡಿದೆ. ಈ ಪ್ರಶ್ನೆ ಪತ್ರಿಕೆಯನ್ನು ಜೆರಾಕ್ಸ್ ಮಾಡಿಸಿ ವಿದ್ಯಾರ್ಥಿಗಳಿಗೆ ಉತ್ತರ ಬರೆದು ತಲುಪಿಸಲಾಗಿದೆ ಎಂದು ಹೇಳಲಾಗು ತ್ತಿದೆ. ಆದರೆ, ಯಾವ ಕೇಂದ್ರದಿಂದ ಮತ್ತು ಯಾರು ಫೋಟೊ ತೆಗೆದಿದ್ದಾರೆ ಎಂಬ ಮಾಹಿತಿಯಿಲ್ಲ. ಯಾವ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬುದು ತಿಳಿದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts