

ನವದೆಹಲಿ: ಸಾವಿರ ಮತ್ತು 500 ರೂಪಾಯಿ ನೋಟುಗಳ ಅಮಾನ್ಯೀಕರಣಕ್ಕೆ 2016ರಲ್ಲಿ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಹಾಜರುಪಡಿಸುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಹೆಚ್ಚು ಮೌಲ್ಯದ ನೋಟು ನಿಷೇಧ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್, ತೀರ್ಪನ್ನು ಕಾದಿರಿಸಿದೆ.
ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ಸದಸ್ಯರ ನ್ಯಾಯ ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಆರ್ಬಿಐ ವಕೀಲರು ಮತ್ತು ಪಿ. ಚಿದಂಬರಂ ಹಾಗೂ ಶ್ಯಾಮ್ ದಿವಾನ್ ಸಹಿತ ಅರ್ಜಿದಾರರ ವಕೀಲರ ವಾದಗಳನ್ನು ಆಲಿಸಿದ್ದು ಸರ್ಕಾರ ತನ್ನ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಸೂಚಿಸಿತು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯ್, ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್ ಮತ್ತು ಬಿ.ವಿ ನಾಗರತ್ನ ಪೀಠದ ಇತರ ಸದಸ್ಯರಾಗಿದ್ದಾರೆ. ಎಲ್ಲ ಕಡೆಯ ವಾದಗಳನ್ನು ಆಲಿಸಲಾಗಿದ್ದು ತೀರ್ಪನ್ನು ಕಾದಿರಿಸಲಾಗಿದೆ ಎಂದು ಪೀಠ ಹೇಳಿದೆ.
ಮುಚ್ಚಿದ ಲಕೋಟೆಯಲ್ಲಿ ದಾಖಲೆ
ಸಂಬಂಧಪಟ್ಟ ಕಡತಗಳು ಮತ್ತು ದಾಖಲೆ ಪತ್ರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದಾಗಿ ಅಟಾರ್ನಿ ಜನರಲ್ ಕೋರ್ಟ್ಗೆ ತಿಳಿಸಿದರು. 2016 ನವೆಂಬರ್ 8ರಂದು ಸರ್ಕಾರ ಪ್ರಕಟಿಸಿದ ನೋಟು ಅಮಾನ್ಯೀಕರಣ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕ್ರಮವನ್ನು ಪ್ರಶ್ನಿಸಿ 58 ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದ್ದು ವಿಚಾರಣೆ ನಡೆಸುತ್ತಿದೆ. ಅಮಾನ್ಯೀಕರಣದ ಕಾರಣ 500 ಹಾಗೂ 1,000 ಮೌಲ್ಯದ ನೋಟುಗಳನ್ನು ಬ್ಯಾಂಕ್ಗೆ ತುಂಬಿಸಲು ಉದ್ದನೆಯ ಸಾಲುಗಳಲ್ಲಿ ನಿಂತಿದ್ದವರಲ್ಲಿ ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸರ್ಕಾರದ ಹಠಾತ್ ನಡೆಯಿಂದ ದೇಶದಾದ್ಯಂತ ಸಾವಿರಾರು ಅತಿ ಸಣ್ಣ ಹಾಗೂ ಸಣ್ಣ ಉದ್ಯಮಗಳು ಬಿಕ್ಕಟ್ಟಿಗೆ ಸಿಲುಕಿದವು ಎಂದು ಆರೋಪಿಸಲಾಗಿದೆ. ಅಲ್ಲದೆ, ಕಪು್ಪ ಹಣ ಹೊರತೆಗೆಯುವ ಹಾಗೂ ಭಯೋತ್ಪಾದನೆ ನಿಯಂತ್ರಣದಂಥ ಘೋಷಿತ ಉದ್ದೇಶವನ್ನು ಸಾಧಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದೂ ಅಮಾನ್ಯೀಕರಣ ವಿರುದ್ಧದ ಪ್ರಮುಖ ಟೀಕೆಯಾಗಿದೆ.