

ಬೆಂಗಳೂರು: ಇದೀಗ ನಮ್ಮ ಮೆಟ್ರೋ ಮೊಬೈಲ್ ಆ್ಯಪ್ನಲ್ಲಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು.
ಈ ಸೇವೆ ನಾಳೆಯಿಂದಲೇ (ಡಿ.8) ಜಾರಿಗೆ ಬರಲಿದೆ. ಇನ್ನು ಮೊಬೈಲಿನಲ್ಲೇ ಮುಂದಿನ ಮೆಟ್ರೋ ಪ್ರಯಾಣದ ಟಿಕೆಟ್ಅನ್ನು ಕಾಯ್ದಿರಿಸಬಹುದು. ನೀವು ಪೇಟಿಎಂ ಹಾಗೂ ಯಾತ್ರಾ ಆ್ಯಪ್ನಲ್ಲಿಯೂ ಟಿಕೆಟ್ ಕಾಯ್ದಿರಿಸಬಹುದು. ಈ-ಟಿಕೆಟ್, ಕ್ಯೂ-ಆರ್ ಕೋಡ್ ರೂಪದಲ್ಲಿ ಇರಲಿದ್ದು, ಗೇಟಿನ ಬಳಿ ಸ್ಕ್ಯಾನ್ ಮಾಡಿದರೆ ಬಾಗಿಲು ತೆರೆದುಕೊಳ್ಳಲಿದೆ. ಇದರಿಂದ ಟಿಕೆಟ್ ಕೌಂಟರ್ ಎದುರು ಲೈನ್ ಹಿಡಿದು ನಿಲ್ಲುವ ಪರಿಸ್ಥಿತಿ ತಪ್ಪಲಿದೆ.
ಪೇಟಿಎಂ (Paytm) ಅಥವಾ ಯಾತ್ರಾ (Yatra) ಆ್ಯಪ್ ಮೂಲಕ ಮೊಬೈಲ್ QR ಟಿಕೆಟ್ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ (android) ಅಥವಾ iOS ಹೊಂದಿರುವ ಮೊಬೈಲ್ನಲ್ಲಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಪ್ರಯಾಣ ಮಾಡುವ ದಿನದಂದು ಪ್ರವೇಶ ಮತ್ತು ಗಮ್ಯಸ್ಥಾನದ ನಿಲ್ದಾಣವನ್ನು ಸ್ಪಷ್ಟಪಡಿಸಿ ಪ್ರಯಾಣಿಕರು ಟಿಕೆಟ್ ಪಡೆಯಬಹುದು.
ಈ-ಟಿಕೆಟ್ಗಳು ಆಯಾ ದಿನದ ಕೊನೆವರೆಗೆ ಮಾತ್ರ ಮಾನ್ಯತೆಯನ್ನು ಹೊಂದಿರಲಿವೆ. ಅಂದರೆ ಈ ದಿನ ಬುಕ್ ಮಾಡಿರುವ ಟಿಕೆಟ್ಗಳನ್ನು ಈ ದಿನವೇ ಬಳಸ ಬೇಕಾಗುತ್ತೆ. ಆದರೆ ಈಗಾಗಲೇ ಟಿಕೆಟ್ ಬುಕ್ ಮಾಡಿದ್ದು, ಪ್ರಯಾಣಿಸುವ ಅಗತ್ಯ ಇಲ್ಲಾ ಎಂದಾದರೆ, ಈ ಟಿಕೆಟ್ಅನ್ನು ರದ್ದುಪಡಿಸಿ ಅದರ ಹಣವನ್ನು ರೀಫಂಡ್ ಮಾಡಿಸಿಕೊಳ್ಳಬಹುದು.
ಇನ್ನು ಇ-ಟಿಕೆಟ್ಗಳನ್ನು ಖರೀದಿಸಿ ಪ್ರಯಾಣ ಮಾಡುವವರಿಗೆ ವಿಶೇಷ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಇ-ಟಿಕೆಟ್ಗಳನ್ನು ಕೌಂಟರ್ನ ದರಕ್ಕಿಂತ ಶೇಕಡ 5ರಷ್ಟು ರಿಯಾಯಿತಿಯಲ್ಲಿ ಕೊಡಲಾಗುತ್ತಿದೆ. ಇಂತಹ ಉತ್ತಮ ಆಫರ್ಅನ್ನು ಜನರು ಬಳಸಿಕೊಳ್ಳಬೇಕು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.