ಮುಂಬೈ: ನಟ, ಬಿಜೆಪಿ ಸನ್ನಿ ಡಿಯೋಲ್-ಅಮಿಶಾ ಪಟೇಲ್ ಅಭಿನಯದ ಗದರ್-2 ಚಿತ್ರವು ಬಾಕ್ಸ್ಆಫೀಸಿನಲ್ಲಿ ಅಬ್ಬರಿಸುತ್ತಿದ್ದು, ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾದರು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ಚಿತ್ರ 500+ ಕೋಟಿ ಕ್ಲಬ್ ಸೇರುವುದು ಖಚಿತ ಎಂದು ಬಾಕ್ಸ್ಆಫೀಸ್ ಪಂಡಿತರು ಭವಿಷ್ಯ ನುಡಿದಿದ್ದಾರೆ.
ಇತ್ತ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಸಿನಿಮಾದಲ್ಲಿ ನಟಿಸಿರುವ ಕಲಾವಿದರಿಗೆ ಹೆಚ್ಚು ಆಫರ್ಗಳು ಬರ ತೊಡಗಿದ್ದು, ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮುಖ್ಯವಾಗಿ ನಟ ಸನ್ನಿಡಿಯೋಲ್ ಎಂದು ಹೇಳಲಾಗುತ್ತಿದೆ.
ನಟ ಸನ್ನಿ ಡಿಯೋಲ್ ತಮ್ಮ ಸಂಭಾವನೆಯನ್ನು 50 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆಂಬ ಗುಸುಗುಸು ಬಿ-ಟೌನ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಏಕಾಏಕಿ ಸಂಭಾವನೆಯ ದರವನ್ನು ಈ ರೀತಿ ಹೆಚ್ಚಿಸಿದರೆ ನಿರ್ಮಾಪಕರು ಹಾಗೂ ನಿರ್ದೇಶಕರುಗಳ ಗತಿಯೇನು ಎಂದು ಹಲವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: VIDEO| ಚಲಿಸುವ ಮೆಟ್ರೋದಲ್ಲಿ ಫ್ಯಾಷನ್ ಶೋ; ವಿಭಿನ್ನ ಪ್ರಯತ್ನಕ್ಕೆ ನಿಬ್ಬೆರಗಾದ ನೆಟ್ಟಿಗರು
ರಾಜಿಯಾಗುವ ಮಾತಿಲ್ಲ
ಈ ಕುರಿತು ಪ್ರತಿಕ್ರಿಯಿಸಿರುವ ನಟ ಸನ್ನಿ ಡಿಯೋಲ್ ಹಣಕಾಸಿನ ವಿಚಾರ ಖಾಸಗಿಯಾಗಿದ್ದು, ಅದನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಬಾರದು. ಮೊದಲಿಗೆ ಹಣದ ವಿಚಾರ ತುಂಬಾ ವೈಯಕ್ತಿಕವಾಗಿದ್ದು, ಯಾರೇ ಆಗಲಿ ತಾವು ಪಡೆದ ಸಂಭಾವನೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ನಾನು ಎಷ್ಟು ಸಂಭಾವನೆ ಪಡೆಯುತ್ತೇನೆ ಎಂಬುದು ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡ ನಂತರ ನಿರ್ಧಾರವಾಗುತ್ತದೆ.
ನನ್ನ ಮೌಲ್ಯ ನನಗೆ ಚೆನ್ನಾಗಿ ತಿಳಿದಿದ್ದು, ಸಂಭಾವನೆ ಪಡೆಯುವ ವಿಚಾರದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಮುಂಚಿನಿಂದಲೂ ಹೇಗಿದ್ದಿನೋ ಹಾಗೆಯೇ ಇದ್ದೇನೆ. ಜನರ ತಪ್ಪು ಗ್ರಹಿಕೆಯಿಂದಾಗಿ ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನನಗೆ ನನ್ನ ಕುಟುಂಬಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ ಎಂದು ದುಬಾರಿ ಸಂಭಾವನೆ ಪಡೆಯುತ್ತಿರುವ ಕುರಿತು ನಟ ಸನ್ನಿ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ.