Sunita Williams : ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಮಾಡಿದ ಸಮರ್ಪಿತ ಕೆಲಸಕ್ಕಾಗಿ ಸುನೀತಾ ವಿಲಿಯಮ್ಸ್ ಅವರನ್ನು ಶ್ಲಾಘಿಸಿದರು. ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ತಂಡವನ್ನೂ ಶ್ಲಾಘಿಸಿದರು.
ಸುನೀತಾ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅವರ ಧೈರ್ಯವನ್ನು ಮೆಚ್ಚಬೇಕು. ನನಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಇದೆ. ವಿವಿಧ ಮೂಲಗಳ ಮೂಲಕ ಮಾಹಿತಿಗಳನ್ನು ತಿಳಿದುಕೊಳ್ಳುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಿದ ಬೆನ್ನಲ್ಲೇ ನಿನ್ನೆ ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ, ಹಲವು ದಿನಗಳ ನಂತರ, ಅಂತಿಮವಾಗಿ ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಸ್ವಾಗತಿಸುತ್ತೇವೆ. ನಮ್ಮ ಭಾರತದ ಮಗಳು ನಮ್ಮ ಬಳಿಗೆ ಮರಳಿದ್ದಾಳೆ ಮತ್ತು ನಾವು ತುಂಬಾ ಸಂತೋಷ ಮತ್ತು ಹರ್ಷಗೊಂಡಿದ್ದೇವೆ. ಅವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಅವರ ಮರಳುವಿಕೆಗೆ ಅಭಿನಂದನೆಗಳು ಎಂದಿದ್ದರು.
Welcome Sunita Williams and Butch Wilmore back to earth, finally and safely, after so many days.
Our daughter of India returns to us, and we are deeply deeply happy and elated. We are profoundly happy for Butch Wilmore also. Hail their courage, hail their return, hail human…
— Mamata Banerjee (@MamataOfficial) March 19, 2025
ಅಂದಹಾಗೆ, ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ 2024, ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ತಲುಪಿದರು. ತಮ್ಮ ಕೆಲಸ ಮುಗಿಸಿ 8 ದಿನದಲ್ಲೇ ಭೂಮಿಗೆ ಹಿಂತಿರುಗಬೇಕಿತ್ತು ಆದರೆ, ಅನಿರೀಕ್ಷಿತವಾಗಿ ಅಲ್ಲಿಯೇ ಸಿಲುಕಿದ ಅವರಿಬ್ಬರು 9 ತಿಂಗಳಿಗಿಂತ ಹೆಚ್ಚು ಕಾಲ ಅಲ್ಲಿಯೇ ಇರಬೇಕಾಯಿತು. ಸುದೀರ್ಘ ಕಾಯುವಿಕೆಯ ನಂತರ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭಾರತೀಯ ಕಾಲಮಾನ ಬುಧವಾರ (ಮಾರ್ಚ್ 19) ಬೆಳಗಿನ ಜಾವ 3.27ಕ್ಕೆ ಅಮೆರಿಕದ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದ್ದಾರೆ. ಈ ಜೋಡಿ 286 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದೆ. (ಏಜೆನ್ಸೀಸ್)
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ಮಲಗುತ್ತಾರೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Sunita Williams
ಶತ್ರುವಿನ ಕಣ್ಮುಂದೆಯೇ ಮಾಯಾವಾಗುವ ಮ್ಯಾಜಿಕಲ್ ಪವರ್ ಹೊಂದಿರೋ ವಿಶ್ವದ ಏಕೈಕ ಜೀವಿ ಇದು! Magical Creature