ನ್ಯೂಯಾರ್ಕ್: ಕಳೆದ 155 ದಿನಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್್ಸ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಸಾಧ್ಯತೆ ಗೋಚರಿಸಿದೆ. ಇತ್ತೀಚಿಗೆ ಬಿಡುಗಡೆ ಮಾಡಲಾದ ಫೋಟೋದಲ್ಲಿ ಸುನಿತಾ ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಅವರ ಕೆನ್ನೆಗಳು ಗುಳಿ ಬಿದ್ದಿದ್ದು, ಆರೋಗ್ಯದಲ್ಲಿ ವ್ಯತ್ಯಯ ಆಗಿರುವುದನ್ನು ಸೂಚಿಸಿದೆ.
ದೀರ್ಘಕಾಲ ಬಾಹ್ಯಾಕಾಶದಲ್ಲಿರುವ ಸುನಿತಾ ಅವರು ಹಲವು ಫೌಂಡ್ ತೂಕವನ್ನು ಕಳೆದುಕೊಂಡಿ ದ್ದಾರೆ. ಅವರ ಚರ್ಮ ಮತ್ತು ಮೂಳೆಗಳ ಮೇಲೂ ಪರಿಣಾಮ ಉಂಟಾಗಿದೆ. ಅವರ ತೂಕವನ್ನು ಸ್ಥಿರಗೊಳಿಸುವುದು ನಮ್ಮ ಮೊದಲ ಆದ್ಯತೆ ಆಗಿದೆ ಎಂದು ನಾಸಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಿಳೆಯರಿಗೆ ಅಪಾಯ ಹೆಚ್ಚು: ಮಹಿಳಾ ಗಗನಯಾತ್ರಿಗಳು ಪುರುಷರಿಗಿಂತ ವೇಗವಾಗಿ ಸ್ನಾಯುವಿನ ಶಕ್ತಿಯನ್ನು ಕಳೆದು ಕೊಳ್ಳುತ್ತಾರೆ ಎಂದು ಇತ್ತೀಚಿನ ಅಧ್ಯಯನ ವೊಂದು ಹೇಳಿದೆ. ಇದು ಸುನಿತಾ ಅವರ ಆರೋಗ್ಯದ ವಿಚಾರದಲ್ಲಿ ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.
ಬಾಹ್ಯಾಕಾಶ ವಾಸ ಏಕೆ?: ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ವೊರ್ ಎಂಟು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಾರ್ಯಾಚರಣೆ ನಡೆಸಲು ಬೋಯಿಂಗ್ ಸ್ಟಾರ್ ಲೈನರ್ ಕಂಪನಿಯ ನೌಕೆ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ನೌಕೆಯಲ್ಲಿ ತಾಂತ್ರಿಕ ದೋಷ ಎದುರಾದ ಕಾರಣ ಅವರು ಭೂಮಿಗೆ ವಾಪಸ್ ಮರಳಲು ಸಾಧ್ಯವಾಗಿಲ್ಲ. ಅವರನ್ನು ಕರೆತರಲು ಮತ್ತೊಂದು ನೌಕೆಯನ್ನು ಕಳಿಸಲಾಗಿದ್ದು, ಮುಂದಿನ ಫೆಬ್ರವರಿ ವೇಳೆಗೆ ಭೂಮಿಗೆ ವಾಪಸ್ ಆಗುವ ನಿರೀಕ್ಷೆ ಇದೆ.
4000 ಕ್ಯಾಲರಿ ಅಗತ್ಯ: ಭೂಮಿಯಲ್ಲಿನ ಮಾನವರಿಗಿಂತ ಗಗನಯಾತ್ರಿಗಳು ಎರಡು ಪಟ್ಟು ಹೆಚ್ಚು ಕ್ಯಾಲರಿ ಸೇವಿಸಬೇಕಾಗುತ್ತದೆ. ಮಹಿಳೆಯರು ತೂಕವನ್ನು ಕಾಪಾಡಿಕೊಳ್ಳಲು ಪ್ರತಿದಿನ 1600ರಿಂದ 2400 ಕ್ಯಾಲರಿ ಸೇವಿಸುವುದು ಅಗತ್ಯವಾಗಿದೆ. ಆದರೆ ಬಾಹ್ಯಾಕಾಶದಲ್ಲಿರುವ ಸುನಿತಾ ಈಗ ಪ್ರತಿದಿನ 3500 ರಿಂದ 4000 ಕ್ಯಾಲರಿ ಸೇವನೆ ಮಾಡಬೇಕಿದೆ. ಅವರು ಸ್ನಾಯುವಿನ ದ್ರವ್ಯರಾಶಿ ಮತ್ತು ಮೂಳೆಗಳ ಸಾಂದ್ರತೆ ಕಾಪಾಡಿಕೊಳ್ಳಲು ಪ್ರತಿದಿನ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡಬೇಕಿದೆ. ಇದನ್ನು ನಿಯಮಿತವಾಗಿ ಅನುಸರಿಸಲು ಸಾಧ್ಯವಾಗದ ಕಾರಣ ಅವರ ತೂಕ ಕಡಿಮೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ನಾಸಾ ವೈದ್ಯರು ಸುಮಾರು ಒಂದು ತಿಂಗಳಿಂದ ಸುನಿತಾ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಮತ್ತಷ್ಟು ಹದಗೆಡದಂತೆ ಮುಂಜಾಗ್ರತೆ ವಹಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
ನನ್ನ ಪ್ರಕಾರ ಮೆಗಾ ಹರಾಜಿನಲ್ಲಿ ಈತ RCB ಪಾಲಿಗೆ ದುಬಾರಿಯಾಗಬಹುದು; ABD ಹೇಳಿದ ಆಟಗಾರ ಯಾರು ಗೊತ್ತಾ?
Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ; BCCI ವಿರುದ್ಧ Court ಮೆಟ್ಟಿಲೇರಲು ಸಜ್ಜಾದ ಪಾಕಿಸ್ತಾನ