Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ; BCCI ವಿರುದ್ಧ Court​ ಮೆಟ್ಟಿಲೇರಲು ಸಜ್ಜಾದ ಪಾಕಿಸ್ತಾನ

Champions Trophy
Published on

ನವದೆಹಲಿ: 2025ರ ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಭಾರತ ಈಗಾಗಲೇ ತನ್ನ ನಿಲುವನ್ನು ತಿಳಿಸಿದ್ದು, ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಕಡ್ಡಿ ಮುರಿದಂತೆ ಹೇಳಿದೆ. ಆದರೆ, ಭಾರತದ ನಿಲುವನ್ನು ವಿರೋಧಿಸುತ್ತಲೇ ಬಂದಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಮಾತ್ರ ಐಸಿಸಿ ಮೇಲೆ ಒತ್ತಡ ಹೇರುತ್ತಿದ್ದು, ಇದೀಗ ನ್ಯಾಯಾಲಯದ ಮೆಟ್ಟಿಲೇರಲು ಸಜ್ಜಾಗಿದ್ದು, ಭಾರತಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

ಬಿಸಿಸಿಐ (BCCI) ವಿರುದ್ಧ ಕೋರ್ಟ್ ಆಫ್​ ಆರ್ಬಿಟ್ರೇಷನ್ ಫಾರ್​ ಸ್ಪೋರ್ಟ್​​ಗೆ (CAS) ಮೇಲ್ಮನವಿ ಸಲ್ಲಿಸಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಸಜ್ಜಾಗಿದ್ದು, ಈ ಬಗ್ಗೆ ಖಾತ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರ ಮುಂದಿನ ದಿನಗಳಲ್ಲಿ ಅದ್ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ. 

ಈ ಸಂಬಂಧ ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಇದು ಐಸಿಸಿ ಆಯೋಜಿಸುತ್ತಿರುವ ಟೂರ್ನಿಯಾಗಿದ್ದು, ಭದ್ರತೆಯ ಕಾರಣದಿಂದಾಗಿ ಭಾರತ ತಂಡ ಪಾಕ್​ಗೆ ಪ್ರಯಾಣಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಈ ವಿಚಾರ ಐಸಿಸಿಯ ನಿಲುವಿಗೆ ಬಿಡಲಾಗಿದ್ದು, ಟೂರ್ನಿ ಆತಿಥ್ಯ ವಹಿಸುತ್ತಿರುವ ರಾಷ್ಟ್ರಕ್ಕೆ ಐಸಿಸಿ ಈ ಬಗ್ಗೆ ಮನವರಿಕೆ ಮಾಡಬೇಕಿದೆ. ಇದಲ್ಲದೆ ಟೂರ್ನಿ ನಡೆಯುವ 100 ದಿನ ಮುಂಚಿತವಾಗಿ ವೇಳಾಪಟ್ಟಿಯನ್ನು ಪ್ರಕಟಿಸಬೇಕಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಭಾರತ ಚಾಂಪಿಯನ್ಸ್​ ಟ್ರೋಫಿಯಲ್ಲಿ (Champions Trophy) ಭಾಗಿಯಾಗುವ ಸಂಬಂಧ ಈಗಾಗಲೇ ಪಿಸಿಬಿ ಕೋರ್ಟ್ ಆಫ್​ ಆರ್ಬಿಟ್ರೇಷನ್ ಫಾರ್​ ಸ್ಪೋರ್ಟ್​​ಗೆ (CAS) ಮನವಿ ಸಲ್ಲಿಸುವ ಬಗ್ಗೆ ಮಾತುಕತೆ ನಡೆಸಿದೆ. ಭಾರತದ ನಿಲುವನ್ನು ಆಧರಿಸಿ ಮುಂದಿನ ಹೆಜ್ಜೆ ಇಡುವ ಬಗ್ಗೆ ಪ್ರಮುಖವಾಗಿ ಮಾತುಕತೆಯಾಗುತ್ತಿದ್ದು, ವರ್ಷಾಂತ್ಯದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಬಹುದು ಎಂದು ಪಿಸಿಬಿ ಮೂಲಗಳು ತಿಳಿಸಿವೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net