ಪ್ರಭಾವಿ ರಾಜಕಾರಣಿ, ಉದ್ಯಮಿಗಳ ಹೆಸರು ಬರೆದಿಟ್ಟು ತಲೆಗೆ ಗುಂಡು ಹಾರಿಸಿಕೊಂಡ ವ್ಯಕ್ತಿ!

8452
Published on

ರಾಮನಗರ: ರಾಜಕಾರಣಿಯೊಬ್ಬರ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರಿನ ಎಚ್​​ಎಸ್​ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಸಾವಿಗೂ ಮುನ್ನ ಮಾಜಿ ಸಚಿವ ಹಾಗೂ ಐವರು ಉದ್ಯಮಿಗಳ ಹೆಸರನ್ನು ಡೆತ್​ನೋಟ್​ನಲ್ಲಿ ಬರೆದಿದ್ದಾನೆ.

ಹೊಸ ವರ್ಷಾಚರಣೆ ಸಲುವಾಗಿ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್​ಗೆ ಕುಟುಂಬ ಸಮೇತ ಬಂದಿದ್ದ ಪ್ರದೀಪ್, ರಾತ್ರಿ ಪಾರ್ಟಿ ಮಾಡಿ, ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್​ನಿಂದ ಭಾನುವಾರ ಬೆಳಗ್ಗೆ ಒಬ್ಬನೆ ಹೊರಟಿದ್ದಾನೆ. ಅಲ್ಲಿಂದ ನೇರವಾಗಿ ನಿವಾಸಕ್ಕೆ ತೆರಳಿ ಡೆತ್ ನೋಟ್ ಬರೆದಿದ್ದಾನೆ. ಬಳಿಕ ರೆಸಾರ್ಟ್​ಗೆ ವಾಪಸ್ಸು ಬಂದು ಕಾರಿನಲ್ಲಿ ಮತ್ತೊಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ನಂತರ ಕುಟುಂಬದವರು ಹೊರಟ್ಟಿದ್ದ ಕಾರನ್ನು ಓವರ್ ಟೇಕ್ ಮಾಡಿ, ತಾನು ಚಲಾಯಿಸುತ್ತಿದ್ದ ಕಾರಿನಲ್ಲೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಡೆತ್ ನೋಟ್ ನಲ್ಲಿ ಏನಿದೆ?
ಎಚ್​ಎಸ್​ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು ಐದು ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ರೂ. ಹಣ ಪಡೆದುಕೊಂಡು, ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿ, ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ರೂ. ಹಣ ನನಗೆ ಬರಬೇಕು.

ಈ ನಡುವೆ ಮಾಜಿ ಸಚಿವರೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದ್ದರು. ಅದರಂತೆ ತಿಂಗಳಿಗೆ ಒಂದು ಲಕ್ಷದಂತೆ ಒಂಬತ್ತು ತಿಂಗಳು ಹಣ ನೀಡುವಂತೆ ಮಾತುಕತೆ ನಡೆಸಿದ್ದರು. ಆದರೆ ಕೇವಲ 9 ಲಕ್ಷ ರೂ. ಹಣವಷ್ಟೆ ಬಂದಿದೆ. ಮಾಜಿ ಸಚಿವರು ಕೂಡ ನನಗೆ ಸಹಾಯ ಮಾಡಿಲ್ಲ ಎಂದು ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಪ್ರಕರಣದ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net