

ಚಾಮರಾಜನಗರ: ಈ ಬಾರಿ ವಾರಾಂತ್ಯದಲ್ಲಿ ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ರಜೆಯೂ ಇದ್ದ ಕಾರಣ ಬಹುತೇಕರು ವಿವಿಧೆಡೆ ಪ್ರವಾಸಿ ತಾಣಗಳಿಗೆ ತೆರಳಿ ಸಂಭ್ರಮಿಸಿದ್ದಾರೆ. ಅಂತೆಯೇ ಹೊಸ ವರ್ಷವನ್ನು ಸಂಭ್ರಮಿಸಲೆಂದು ಹೊರ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಬೆಂಗಳೂರಿಗೆ ಬಂದಿದ್ದಾರೆ.
ಇದೀಗ ಹೊಸ ವರ್ಷಾಚರಣೆಗೆ ಕೇರಳದಿಂದ ಬಂದಿದ್ದ ಏಳು ಮಂದಿ ಯುವಕರು, ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಹೊನ್ನೇಗೌಡನಹಳ್ಳಿ ಗೋಪಾಲಪುರ ರಸ್ತೆಯಲ್ಲಿ ಹರಡಿದ್ದ ಹುರುಳಿ ಸೊಪ್ಪು ಕಾರಿನಡಿ ಸಿಲುಕಿಕೊಂಡಿದೆ. ಇದು ಇಂಜಿನ್ಗೆ ತಗುಲಿದ ಕಾರಣ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಏಳು ಜನರೂ ತಪ್ಪಿಸಿಕೊಂಡು ಕಾರಿನಿಂದ ಹೊರ ಬಂದಿದ್ದಾರೆ. ಇದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಮಧ್ಯೆದಲ್ಲೇ ಧಗದಗನೆ ಹೊತ್ತಿ ಉರಿದ ಪರಿಣಾಮ ಕಾರು ಸಂಪೂರ್ಣವಾಗಿ ಭಸ್ಮವಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಇದರಿಂದ ಹೆಚ್ಚಿನ ಅವಘಡ ತಡೆದಿದ್ದಾರೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.