ನ್ಯೂ ಇಯರ್ ಪಾರ್ಟಿಗೆಂದು ಭರ್ಜರಿ ಶಾಪಿಂಗ್; 28 ಸಾವಿರ ರೂ. ಕೊಟ್ಟು ಈತ ಖರೀದಿಸಿದ್ದು ಮಾತ್ರ ಚಿಪ್ಸ್ ಪ್ಯಾಕೆಟ್!

Chips
Published on

ಬೆಂಗಳೂರು: ಕರೋನಾ, ಲಾಕ್​ಡೌನ್ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಹೊಸ ವರ್ಷದ ಸಂಭ್ರಮಾಚರಣೆ ಕಳೆಗುಂದಿತ್ತು. ಆದರೆ 2023ರ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ವಾರಾಂತ್ಯದಲ್ಲಿ ಹೊಸ ವರ್ಷ ಬಂದಿರುವ ಕಾರಣ ಬಹುತೇಕರು ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಅಂತೆಯೇ ವಾರಾಂತ್ಯದ ನ್ಯೂ ಇಯರ್ ಪಾರ್ಟಿಗಾಗಿ ಭರ್ಜರಿ ಶಾಪಿಂಗ್ ಕೂಡಾ ನಡೆದಿದೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬ ಆನ್ಲೈನ್​ ಶಾಪಿಂಗ್ ತಾಣದಲ್ಲಿ ಬರೋಬ್ಬರಿ 28,962 ರೂ. ಮೊತ್ತದ ಶಾಪಿಂಗ್ ಮಾಡಿ ಸುದ್ದಿಯಾಗಿದ್ದಾನೆ.

ಬೆಂಗಳೂರಿನ ವ್ಯಕ್ತಿಯೊಬ್ಬ ಹೊಸ ವರ್ಷಕ್ಕೆಂದು 28,962 ರೂ. ಮೊತ್ತದ ಶಾಪಿಂಗ್ ಮಾಡಿರುವುದನ್ನು ಬ್ಲಿಂಕಿಟ್ ಶಾಪಿಂಗ್ ವೆಬ್​​ಸೈಟ್​​ನ ಸಿಇಒ ಮತ್ತು ಸಹ-ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಗ್ರಾಹಕ ಹೊಸ ವರ್ಷದ ಹಿಂದಿನ ದಿನ ಚಿಪ್ಸ್​ ಪ್ಯಾಕೆಟ್, ಟಾನಿಕ್ ಹಾಗೂ ಸ್ಪೀಕರ್​ನ್ನು ಕೊಂಡುಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಸಿಇಒ ಮತ್ತು ಸಹ-ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಟ್ವೀಟ್ ಮೂಲಕ, ಬ್ಲಿಂಕಿಟ್ ಆ್ಯಪ್​ನಲ್ಲಿ ಪ್ರತಿ ಸೆಕುಂಡಿನ 41 ಚಿಪ್ಸ್ ಪ್ಯಾಕೆಟ್​ಗಳನ್ನು ಗ್ರಾಹಕರು ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಬ್ಲಿಂಕಿಟ್ ಆ್ಯಪ್ ದೇಶದ 30ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಜನರು ಹೊಸ ವರ್ಷದ ನಿಮಿತ್ತ ಸಾಕಷ್ಟು ಸಂಖ್ಯೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಇದು ಆನ್​ಲೈನ್ ಶಾಪಿಂಗ್ ತಾಣಗಳಿಗೆ ವರದಾನವಾದಂತಾಗಿದೆ. ಬಹುತೇಕರು ತಮಗೆ ಅಗತ್ಯದ ವಸ್ತುಗಳನ್ನು ಆನ್​ಲೈನ್ ಮೂಲಕ ತರಿಸಿಕೊಂಡಿದ್ದು, ಡಿಸೆಂಬರ್ 31 ರಂದು ಬ್ಲಿಂಕಿಟ್ ಹಾಗೂ ಝೋಮ್ಯಾಟೋ ಪ್ಲಾಟ್‌ಫಾರ್ಮ್‌ಗಳು ಹೆಚ್ಚಿನ ಸಂಖ್ಯೆಯ ಆರ್ಡರ್‌ಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net