

ಬೆಂಗಳೂರು: ಹೊಸ ವರ್ಷದಂದೇ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಚಾಮರಾಜಪೇಟೆಯ ಗವಿಗಂಗಾಧರ ಸ್ವಾಮಿ ದೇವಸ್ಥಾನದ ಮುಂಭಾಗದ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ದೇವಸ್ಥಾನದ ಮುಂಭಾಗವಿರುವ ಕಸದ ತೊಟ್ಟಿಯಲ್ಲಿ ಗಂಡು ಮಗು ಪತ್ತೆಯಾಗಿದೆ. ನವಜಾತ ಶಿಶುವನ್ನು ಸೀರೆಯಲ್ಲಿ ಸುತ್ತಿ ಕಸದ ತೊಟ್ಟಿಗೆ ಎಸೆದಿದ್ದಾರೆ. ಬೆಳಗ್ಗೆ ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದ ಸ್ವಚ್ಛತಾ ಸಿಬ್ಬಂದಿಗೆ ಮಗು ಇರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಮಗು ಮೃತ ಪಟ್ಟಿದೆ ಎಂದು ಅರಿವಾಗಿದೆ.
ಕೂಡಲೇ ಸ್ವಚ್ಛತಾ ಸಿಬ್ಬಂದಿಗಳು ಬಿಬಿಎಂಪಿ ಮಾರ್ಷಲ್ ತಂಡಕ್ಕೆ ಮಾಹಿತಿ ನೀಡಿ, ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೆಂಪೇಗೌಡ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಆ್ಯಂಬುಲೆನ್ಸ್ ಮುಖಾಂತರ ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದೇ ಮಾದರಿಯ ಘಟನೆ ಈ ಹಿಂದೆ ಕಾರವಾರದಲ್ಲಿ ನಡೆದಿತ್ತು. ಮಗುವಿನಲ್ಲಿ ಅಂಗವಿಕಲತೆ ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಪೋಷಕರು ನವಜಾತ ಶಿಶುವನ್ನು ಬಾಕ್ಸ್ನಲ್ಲಿ ಹಾಕಿ ರಸ್ತೆ ಬದಿ ಎಸೆದಿದ್ದರು. ಸಿದ್ದಾಪುರದಿಂದ ಗುಡ್ಡೆಕೊಪ್ಪಕ್ಕೆ ತೆರಳುವ ತ್ಯಾರ್ಸಿ-ತಡಕೇರಿ ತಿರುವಿನ ಬಳಿ ಮಗು ಪತ್ತೆಯಾಗಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ರಕ್ಷಿಸಿದ್ದರು. ಮಗುವಿನ ಆರೋಗ್ಯ ತಪಾಸಣೆ ನಡೆಸಿ, ಶಿರಸಿಯ ದತ್ತು ಮಕ್ಕಳ ಕೇಂದ್ರದ ಆರೈಕೆಗೆ ಒಪ್ಪಿಸಲಾಗಿತ್ತು.