ಕೋಪದಲ್ಲಿ ತಾಯಿಯನ್ನೇ ಮುಗಿಸಿದ ಮಗ! ಅಂಥದ್ದೇನಾಯ್ತು?

Police
Published on

ಉತ್ತರಪ್ರದೇಶ: ಕುಡಿತದ ಚಟ ಯಾವತ್ತಿಗೂ ಒಳ್ಳೆಯದಲ್ಲ. ಇದರಿಂದ ನಿನ್ನ ಆರೋಗ್ಯದ ಜತೆಗೆ ಜೀವನವೂ ಹಾಳಾಗುತ್ತಿದೆ. ಭವಿಷ್ಯದ ಬಗ್ಗೆ ಯೋಚಿಸು ಎಂದು ಮಗನಿಗೆ ಬುದ್ಧಿವಾದ ಹೇಳಿದ್ದೇ ತಾಯಿಯ ಸಾವಿಗೆ ಕಾರಣವಾಗಿದೆ. ಹೌದು, ಕುಡಿತದ ಚಟ ಬೆಳೆಸಿಕೊಂಡಿದ್ದ ಮಹೇಶ್ ಎಂಬಾತ, ಕೋಪದಲ್ಲಿ ತನ್ನ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದೀಗ ಆರೋಪಿ ಮಹೇಶ್​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತ ಆರೋಪಿ ಮಹೇಶ್ ಎಂದಿನಂತೆ ಕುಡಿದು ಬಂದು ತಾಯಿಯೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ತಾಯಿ ಕೈಲಾಶೋ ಸ್ವಲ್ಪ ಜೋರಾಗಿಯೇ ಮಗನನ್ನು ಗದರಿದ್ದಾನೆ. ಇದರಿಂದ ಏಕಾಏಕಿ ಸಿಟ್ಟಾದ ಆರೋಪಿ ಮಹೇಶ್ ಅಲ್ಲೇ ಪಕ್ಕದಲ್ಲಿದ್ದ ಚಾಕುವಿನಿಂದ ತನ್ನ ತಾಯಿಯ ಕತ್ತು ಸೀಳಿದ್ದಾನೆ. ಗಂಭೀರಗೊಂಡ ತಾಯಿ ಕೈಲಾಶೋ ಸ್ಥಳದಲ್ಲೇ ರಕ್ತದ ಮಡುವಿನಿಂದ ಬಿದ್ದು ಸಾವನ್ನಪ್ಪಿದ್ದಾಳೆ.

ಮನೆಯಲ್ಲಿ ಕಿರುಚಾಟ ಕೇಳಿ ಸುತ್ತಮುತ್ತಲಿನ ಜನರು ಭಯಬೀತರಾಗಿ ಬಂದು ನೋಡಿದಾಗ ಕೈಲಾಶೋ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಆರೋಪಿ ಮಹೇಶನನ್ನು ಬಂಧಿಸಿದ್ದಾರೆ.

ಮೃತ ಕೈಲಾಶೋಗೆ 7 ಗಂಡು ಮಕ್ಕಳಿದ್ದು, 6 ಮಕ್ಕಳಿಗೆ ಮದುವೆಯಾಗಿದೆ. ಎಲ್ಲರೂ ತಮ್ಮ ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕಿರಿಯ ಮಗ ಮಹೇಶ್​ಗೆ ಮದುವೆ ಆಗಿರಲಿಲ್ಲ. ಹೀಗಾಗಿ ತಾಯಿಯೊಂದಿಗೆ ವಾಸಿಸುತ್ತಿದ್ದ. ಮಹೇಶ ಕುಡಿತ ಅಭ್ಯಾಸ ಮಾಡಿಕೊಂಡಿದ್ದು, ದಿನವೂ ಕುಡಿದು ಮನೆಗೆ ಬರುತ್ತಿದ್ದ. ಈ ವೇಳೆ ತಾಯಿ ನಿಂದಿಸುತ್ತಿದ್ದಳು. ಇದರಿಂದ ಕೋಪಗೊಂಡ ಮಹೇಶ್ ತಾಯಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ವಿಚಾರಣೆಯ ನಂತರ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net