

ಕಾರವಾರ: ಪೋಷಕರು ಹಸುಗೂಸನ್ನು ಬಾಕ್ಸ್ನಲ್ಲಿ ಹಾಕಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಸಿದ್ಧಾಪುರದಲ್ಲಿ ನಡೆದಿದೆ.
ಸಿದ್ಧಾಪುರದಿಂದ ಗುಡ್ಡೆಕೊಪ್ಪಕ್ಕೆ ತೆರಳುವ ತ್ಯಾರ್ಸಿ-ತಡಕೇರಿ ತಿರುವಿನ ಬಳಿ ಮಗುವನ್ನು ಬಾಕ್ಸ್ನಲ್ಲಿ ಹಾಕಿ ಬಿಟ್ಟು ಹೋಗಿದ್ದಾರೆ. ಇದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಬಾಕ್ಸ್ ತೆರೆದು ನೋಡಿದಾಗ ಹಸುಗೂಸು ಇರುವುದು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನವಜಾತ ಮಗು ಸಿಕ್ಕಿರುವ ಜಾಗಕ್ಕೆ ಪೊಲೀಸರು ಬಂದು, ಮಹಿಳಾ ಮತ್ತು ಶಿಶು ಕಲ್ಯಾಣ ಅಧಿಕಾರಿ ಪೂರ್ಣಿಮಾ ಆರ್.ದೊಡ್ಡನಿ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಅನಾಥವಾಗಿದ್ದ ಮಗುವನ್ನು ಸ್ಥಳೀರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಹಾಲುಣಿಸಿ, ಆರೋಗ್ಯ ತಪಾಸಣೆ ಮಾಡಲಾಗಿದೆ. ಮಗುವನ್ನು ಶಿರಸಿಯ ದತ್ತು ಮಕ್ಕಳ ಕೇಂದ್ರಕ್ಕೆ ತಲುಪಿಸುವುದಾಗಿ ಶಿಶು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮಾಹಿತಿ ನೀಡಿದ್ದಾರೆ.
ರಸ್ತೆ ಬದಿ ಬಾಕ್ಸ್ನಲ್ಲಿ ಸಿಕ್ಕಿರುವ ಮಗು ಅಂಗವೈಕಲ್ಯ ಹೊಂದಿತ್ತು. ಹೀಗಾಗಿ ಪೋಷಕರು ಮಗುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸದ್ಯ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಅನಾಥವಾಗಿರುವ ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.