

ಗದಗ: ಮುತ್ತಪ್ಪ ಹಡಗಲಿ ಎಂಬ ಅತಿಥಿ ಶಿಕ್ಷಕನ ಹುಚ್ಚಾಟಕ್ಕೆ 4ನೇ ತರಗತಿಯಲ್ಲಿದ್ದ ಭರತ್(10) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಗಂಭೀರ ಗಾಯಗೊಂಡಿದ್ದ ಸಹಶಿಕ್ಷಕಿ ಗೀತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ, ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿ ಗೀತಾ ಹಾಗೂ ವಿದ್ಯಾರ್ಥಿ ಭರತ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದರಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡ ಆಸ್ಪತ್ರೆ ಸೇರಿದ್ದರು.
ಆರೋಪಿ ಮುತ್ತಪ್ಪ ಹಡಗಲಿ ಏಕಾಏಕಿ ಕಂಡ ಕಂಡವರ ಮೇಲೆ ಸಲಿಕೆಯಿಂದ ಹಲ್ಲೆ ಮಾಡಿದ್ದಾನೆ. ಹುಚ್ಚಾಟ ನೋಡಿದ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಭಯಗೊಂಡಂತಹ ಘಟನೆ ನಡೆದಿದೆ. ಇದೀಗ ಶಿಕ್ಷಕನ ವಿರುದ್ಧ ನರಗುಂದ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವಿದ್ಯಾರ್ಥಿ ಭರತ್ ಹಲ್ಲೆಗೊಳಗಾದ ಶಿಕ್ಷಕಿ ಗೀತಾ ಪುತ್ರ. ಕಿರಾತಕ ಶಿಕ್ಷಕ ಭರತ್ಗೆ ಸಲಿಕೆಯಿಂದ ಹೊಡೆದು, ಶಾಲೆಯ ಒಂದನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ. ಈ ವೇಳೆ ತಡೆಯಲು ಹೋದ ಇನ್ನೊಬ್ಬ ಶಿಕ್ಷಕ ಎಸ್.ಸಿ.ಪಾಟೀಲ್ ಮೇಲೆಯೂ ಹಲ್ಲೆ ಮಾಡಿದ್ದಾನೆ.
ಶಾಲೆಯಲ್ಲಿ ಅಮಾನುಷ ಘಟನೆಯೊಂದು ನಡೆಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಶಾಲೆಯ ಆವರಣದಲ್ಲಿ ಜಮಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಶಾಲಾ ಆವರಣದಲ್ಲಿ ಠಿಕಾಣಿ ಹೂಡಿದ್ದಾರೆ. ಸದ್ಯ ಶಾಲೆಯ ಸಹಶಿಕ್ಷಕರನ್ನು ವಿಚಾರಿಸಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.