ಎರಡನೇ ಲವರ್ ಜತೆ ಸೇರಿ ಮೊದಲನೇ ಪ್ರಿಯಕರನ ಹತ್ಯೆ; ಶವವನ್ನು ಡ್ರಮ್​​ನಲ್ಲಿ ಹಾಕಿ ಸ್ಕೂಟರ್​​ನಲ್ಲಿ ಸಾಗಿಸಿದ ಪ್ರೇಯಸಿ!

Child Welfare Committee member was murdered by his own married girlfriend along with her other lover
Published on

ಛತ್ತೀಸ್‌ಗಢ: ರಾಜನಂದಗಾಂವ್​ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಸದಸ್ಯನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಾಪತ್ತೆಯಾಗಿದ್ದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಚಂದ್ರಭೂಷಣ್ ಠಾಕೂರ್ (55 ವರ್ಷ) ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಾಜನಂದಗಾಂವ್‌ನಿಂದ 60 ಕಿಮೀ ದೂರದಲ್ಲಿರುವ ಡೊಂಗರ್‌ಗಢ್‌ನ ಬೋರ್ತಲಾಬ್‌ನ ಕೊಟ್ನಾಪಾನಿ ಅರಣ್ಯದಲ್ಲಿ ಮೃತ ದೇಹ ಪತ್ತೆಯಾಗಿತ್ತು.

ಕೊಲೆಯಾಗಿರುವ ಚಂದ್ರಭೂಷಣ್ ಠಾಕೂರ್​ಗೆ ಅದಾಗಲೇ ಮದುವೆಯಾಗಿತ್ತು. ಹೀಗಿದ್ದೂ ಲಾಭಿನಿ ಸಾಹು ಎಂಬಾಕೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ. ಆದರೆ ಲಾಭಿನಿ ಸಾಹು ಚಂದ್ರಭೂಷಣ್ ಜತೆಗಿನ ಸಂಪರ್ಕದೊಂದಿದೆ ಬೇರೊಬ್ಬನೊಂದಿಗೂ ಸಂಬಂಧ ಬೆಳೆಸಿಕೊಂಡಿದ್ದಳು ಎಂದು ಇದೀಗ ಕೊತ್ವಾಲಿ ಠಾಣಾ ಪೊಲೀಸರು ತಿಳಿಸಿದ್ದಾರೆ.

ಚಂದ್ರಭೂಷಣ್ ಠಾಕೂರ್​ನ ಜತೆಗೆ ಸಂಬಂಧ ಬೆಳೆಸಿಕೊಂಡಿದ್ದ ಲಾಭಿನಿ ಸಾಹು, ತನ್ನ ಪ್ರಿಯಕರನ ಸಹಾಯದೊಂದಿಗೆ ಕೊಲೆ ಮಾಡಿದ್ದಾಳೆ. ನಂತರ ಶವವನ್ನು ಡ್ರಮ್‌ನಲ್ಲಿ ತುಂಬಿ ಅರಣ್ಯಕ್ಕೆ ಎಸೆದು ಬಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಮೃತದೇಹವನ್ನು ಬೆತ್ತಲೆಯಾಗಿ ಮಾಡಿ, ಮುಖಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಚಂದ್ರಭೂಷಣ ಠಾಕೂರ್ ಪತ್ನಿ, ಪೊಲೀಸ್ ಠಾಣೆಗೆ ತೆರಳಿ ನನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಲಾಭಿನಿ ಸಾಹು ಮನೆ ವಠಾರದಲ್ಲಿ ಚಂದ್ರಭೂಷಣ್ ಕಾರು ಇರುವುದು ಪತ್ತೆಯಾಗಿದೆ. ಮತ್ತಷ್ಟು ಆಳವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಲಾಭಿನಿ ಸಾಹು ಸ್ಕೂಟರ್ ಒಂದರಲ್ಲಿ ಡ್ರಮ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಲಾಭಿನಿ ಸಾಹುಳನ್ನು ವಿಚಾರಿಸಿದ್ದಾರೆ.

ತನಿಖೆಯ ವೇಳೆ ತನ್ನ ಎರಡನೇ ಪ್ರಿಯಕರ ನೂತನ್ ಸಾಹು ಎಂಬಾತನೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೆಲ ಸಮಯದ ಹಿಂದೆ ಚಂದ್ರಭೂಷಣ್ ನನ್ನ ಮನೆಗೆ ಬಂದಿದ್ದರು. ಈ ವೇಳೆ ನನಗೆ ನೂತನ್ ಜತೆಗೆ ಸಂಬಂಧವಿರುವುದು ಗೊತ್ತಾಗಿದೆ. ಈ ಹಿಂದೆ ನನಗೆ ಫಾಸ್ಟ್​ಫುಡ್ ಸೆಂಟರ್ ತೆರೆಯಲು ಚಂದ್ರಭೂಷಣ್ ಹಣ ನೀಡಿದ್ದರು. ಯಾವಾಗ ನೂತನ್ ಜತೆಗಿನ ನನ್ನ ಸಂಬಂಧ ಗೊತ್ತಾಯಿತೋ ಅಂದಿನಿಂದ ಹಣ ಹಿಂತಿರುಗಿಸುವಂತೆ ಚಂದ್ರಭೂಷಣ್ ಹೇಳುತ್ತಿದ್ದರು. ಇದರಿಂದ ಬೇಸತ್ತು ಹೋಗಿದ್ದೆ. ಹಾಗಾಗಿ ಅವರನ್ನು ನನ್ನ ಮನೆಯಲ್ಲಿ ಭೇಟಿಯಾಗುವಂತೆ ಆಹ್ವಾನಿಸಿದ್ದೆ.

ಚಂದ್ರಭೂಷಣ್ ಭೇಟಿಯಾಗಲು ಬಂದ ಕೂಡಲೇ ಇಬ್ಬರೂ ಸೇರಿ ಮಡಕೆಯಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದೆವು.ಬಳಿಕ ಇಬ್ಬರೂ ಪ್ಲಾಸ್ಟಿಕ್ ಡ್ರಮ್​ನಲ್ಲಿ ಮೃತದೇಹವನ್ನು ತುಂಬಿ, ಕಾಡಿನಲ್ಲಿ ಎಸೆದು ಬಂದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net