ಲಾಕ್‌ಡೌನ್‌ನಲ್ಲಿ ಸುದೀಪ್​ ಅದೆಷ್ಟು ಬದಲಾಗಿದ್ದಾರೆ ...

Sudeep Final
Published on

‘ಪೈಲ್ವಾನ್’ ಚಿತ್ರಕ್ಕಾಗಿ ಸುದೀಪ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ದೇಹವನ್ನು ಹುರಿಗೊಳಿಸಿದ್ದು ಗೊತ್ತೇ ಇದೆ. ಹಾಗಂತ ಆ ಚಿತ್ರ ಮುಗಿಯಿತು ಎಂದು ಸುದೀಪ್ ಕಸರತ್ತಿಗೆ ಫುಲ್‌ಸ್ಟಾಪ್ ಹಾಕಿಲ್ಲ. ಅದರ ನಂತರವೂ ಕಸರತ್ತು ಮುಂದುವರೆಸಿರುವ ಸುದೀಪ್, ಲಾಕ್‌ಡೌನ್ ಸಮಯವನ್ನು ಬಳಸಿಕೊಂಡು ತಮ್ಮ ದೇಹವನ್ನು ಇನ್ನಷ್ಟು ಹುರಿಗೊಳಿಸಿದ್ದಾರೆ.

ಹೌದು, ಈ ಲಾಕ್‌ಡೌನ್ ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ಸುದೀಪ್, ಸಾಕಷ್ಟು ಕಸರತ್ತು ಮಾಡಿದ್ದಾರೆ. ತಮ್ಮ ಮನೆಯ ಜಿಮ್‌ನಲ್ಲಿರುವ ಡಂಬಲ್ಸ್​ ಸೇರಿದಂತೆ ಕೆಲವು ಪರಿಕರಗಳನ್ನಿಟ್ಟುಕೊಂಡು, ದೇಹವನ್ನು ಇನ್ನಷ್ಟು ಹುರಿಗೊಳಿಸಿದ್ದಾರೆ. ಬರೀ ದೇಹದಂಡನೆಯಷ್ಟೇ ಅಲ್ಲ, ಕಟ್ಟುನಿಟ್ಟಿನ ಡಯಟ್ ಸಹ ಪಾಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುದೀಪ್ ಅವರು ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.

ಇಷ್ಟೆಲ್ಲಾ ತಯಾರಿ ಯಾಕೆ ಎಂದರೆ, ಅದಕ್ಕೆ ಉತ್ತರ ಅವರ ಹೊಸ ಚಿತ್ರ ‘ಫ್ಯಾಂಟಮ್’. ಲಾಕ್‌ಡೌನ್ ಶುರುವಾಗುವುದಕ್ಕೆ ಮುನ್ನವೇ ‘ಫ್ಯಾಂಟಮ್​’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಶುರುವಾಗಿತ್ತು. ಒಂದಿಷ್ಟು ಚಿತ್ರೀಕರಣವೂ ಮುಗಿದಿತ್ತು. ಈ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾದ್ದರಿಂದ ಚಿತ್ರೀಕರಣ ನಿಲ್ಲಿಸಬೇಕಾಯಿತು. ಲಾಕ್‌ಡೌನ್ ಮುಂದುವರೆದಿರುವದರಿಂದ, ಸುದೀಪ್ ಪಾತ್ರಕ್ಕೆ ಬೇಕಾದ ಸಿದ್ಧತೆಗಳನ್ನು ಮನೆಯಲ್ಲಿಯೇ ಸದ್ದಿಲ್ಲದೆ ಮಾಡಿಕೊಳ್ಳುತ್ತಿದ್ದಾರೆ.

‘ಫ್ಯಾಂಟಮ್​’ ಚಿತ್ರದಲ್ಲಿ ಸುದೀಪ್, ವಿಕ್ರಾಂತ್ ರೋಣ ಎಂಬ ಪಾತ್ರ ಮಾಡುತ್ತಿದ್ದಾರೆ. ‘ರಂಗಿತರಂಗ’ ನಿರ್ದೇಶಿಸಿದ್ದ ಅನೂಪ್ ಭಂಡಾರಿ, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಜಾಕ್ ಮಂಜು ನಿರ್ಮಿಸುತ್ತಿದ್ದು, ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net