ಶೂಟಿಂಗ್ ಮಾಡಿದ್ದು ಹೌದು ... ಎನಿ ಪ್ರಾಬ್ಲಮ್?

Amitabh Bachchan
Published on

ಲಾಕ್‌ಡೌನ್ ಅಂತ ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಗೆ ಮನೆಯಲ್ಲೇ ಕುಳಿತಿರುವಾಗಲೇ, ಅಮಿತಾಭ್ ಬಚ್ಚನ್ ಮಾತ್ರ ಸದ್ದಿಲ್ಲದೆ ಕೆಲಸ ಮಾಡಿದ್ದಾರೆ ಮತ್ತು ಆ ಕೆಲಸಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಇಷ್ಟಕ್ಕೂ ಆಗಿದ್ದೇನು ಎಂದರೆ, ‘ಕೌನ್ ಬನೇಗಾ ಕರೋಡ್‌ಪತಿ’ಯ ಸೀಸನ್ 12ರ ಪ್ರೋಮೋ ಶೂಟಿಂಗ್‌ನಲ್ಲಿ ‘ಬಿಗ್ ಬಿ’ ಭಾಗವಹಿಸಿದ್ದಾರೆ. ಅವರ ಮನೆಯಲ್ಲೇ ಈ ಪ್ರೋಮೋದ ಶೂಟಿಂಗ್ ನಡೆದಿದೆ. ಯಾವಾಗ ಈ ಪ್ರೋಮೋಗಳು ಟಿವಿ ಪರದೆಯ ಮೇಲೆ ಕಾಣಿಸಿಕೊಂಡವೋ, ಆಗಿಂದ ಸೋಷಿಯಲ್ ಮೀಡಿಯಾದಲ್ಲಿ ಜನ ಅಮಿತಾಭ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇಂಥ ಸಂದರ್ಭದಲ್ಲೂ ಕೆಲಸ ಮಾಡುವ ಅವಶ್ಯಕತೆ ಇತ್ತಾ? ಕೆಲಸ ಮಾಡಿದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತಾ? ಎಂಬ ಪ್ರಶ್ನೆಗಳಿಂದ ಚುಚ್ಚಿದ್ದಾರೆ. ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅಮಿತಾಭ್, ಕೊನೆಗೂ ಉತ್ತರ ಕೊಟ್ಟಿದ್ದಾರೆ. ‘ಶೂಟಿಂಗ್ ಮಾಡಿದ್ದು ಹೌದು. ಏನೀಗ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ಜವಾಬು ಕೊಟ್ಟಿರುವ ಅವರು, ‘ಶೂಟಿಂಗ್ ಮಾಡಿದ್ದು ಹೌದು. ಅದರಿಂದ ಏನಾದರೂ ಸಮಸ್ಯ ಇದೆಯಾ? ಇದ್ದರೆ ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ. ಈ ಲಾಕ್‌ಡೌನ್ ಸಂದರ್ಭದಲ್ಲಿ ಸುಮ್ಮನೆ ದೊಡ್ಡದು ಮಾಡಬೇಡಿ. ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡೇ ಚಿತ್ರೀಕರಣ ಮಾಡಿರುವುದು. ಸಮಸ್ಯೆಯಾಗಬಾರದು ಎಂದು ಎರಡು ದಿನಗಳ ಕೆಲಸವನ್ನು ಒಂದೇ ದಿನದಲ್ಲಿ ಮುಗಿಸಿದ್ದೇವೆ. ಇನ್ನು ಈ ಬಾರಿ ‘ಕೌನ್ ಬನೇಗಾ ಕರೋಡ್‌ಪತಿ’ಯನ್ನು ಹೇಗೆ ಚಿತ್ರೀಕರಣ ಮಾಡಲಾಗುತ್ತದೆ ಎಂಬ ಪ್ರಶ್ನೆ ಇದೆ. ಸದ್ಯಕ್ಕೆ ನನ್ನ ಬಳಿ ಸ್ಪಷ್ಟ ಉತ್ತರವಿಲ್ಲ. ಆದರೆ, ಚಾನಲ್‌ನವರಿಗೆ ಮತ್ತು ಕಾರ್ಯಕ್ರಮ ನಿರ್ದೇಶಕರಿಗೆ ಈ ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸುವ ವಿಶ್ವಾಸವಿದೆ’ ಎಂದು ಉತ್ತರ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net