ಥ್ಯಾಂಕ್ ಯೂ ಶಾರೂಖ್ ... ಹಾಗಂತ ‘ಕಿಂಗ್ ಖಾನ್’ಗೆ ಹೇಳಿದ್ದು ಯಾರು?

Shahrukh - Paulo
Published on

‘ಕಿಂಗ್ ಖಾನ್’ ಶಾರೂಖ್ ಖಾನ್ ಜನಪ್ರಿಯತೆ ಬರೀ ಬಾಲಿವುಡ್‌ನಲ್ಲೇಷ್ಟೇ, ಅಂತಾರಾಷ್ಟ್ರೀಯ ಮಟ್ಚದಲ್ಲೂ ಇದೆ. ಬೇರೆ ಬೇರೆ ದೇಶಗಳ ಹಲವು ಜನಪ್ರಿಯ ಸ್ಟಾರ್‌ಗಳು ಶಾರೂಖ್ ಅವರನ್ನು ಮೆಚ್ಚಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಲೇಖಕರೊಬ್ಬರು ಇದೀಗ ಶಾರೂಖ್ ಬೆನ್ನು ತಟ್ಟಿರುವುದಷ್ಟೇ ಅಲ್ಲ, ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆ ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕ ಯಾರು ಗೊತ್ತಾ? ಪಾಲೋ ಕೊಯೆಲ್ಹೋ.

‘ದಿ ಆಲ್ಕೆಮಿಸ್ಟ್’ ಎಂಬ ಜಗತ್ಪ್ರಸಿದ್ಧ ಪುಸ್ತಕವನ್ನು ಬರೆದವರು ಪಾಲೋ ಕೊಯೆಲ್ಹೋ. ಅವರ ಪುಸ್ತಕಗಳನ್ನು ಜಗತ್ತಿನ ಹಲವು ಭಾಷೆಗಳಿಗೆ ತರ್ಜುಮೆಯಾಗಿರುವುದಷ್ಟೇ ಅಲ್ಲ, ಜಗತ್ತಿನಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅಂಥವರು, ಇದೀಗ ಶಾರೂಖ್ ಖಾನ್ ಅವರನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅದಕ್ಕೆ ಕಾರಣ, ‘ಹರ್ ಕಿಸ್ಸೇ ಕೆ ಹಿಸ್ಸೇ ಕಾಮ್ಯಾಬ್’ ಎಂಬ ಚಿತ್ರ.

‘ಹರ್ ಕಿಸ್ಸೇ ಕೆ ಹಿಸ್ಸೇ ಕಾಮ್ಯಾಬ್’ ಎಂಬ ಚಿತ್ರ ಲಾಕ್‌ಡೌನ್ ಶುರುವಾಗುವ ಮುನ್ನ ಬಿಡುಗಡೆಯಾಗಿತ್ತು. ಸೈಡ್ ಆ್ಯಕ್ಟರ್ ಒಬ್ಬನ ಜೀವನದ ಕುರಿತಾದ ಈ ಚಿತ್ರವನ್ನು ಶಾರೂಖ್ ಖಾನ್‌ನ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಿಸಿತ್ತು. ಸಂಜಯ್ ಮಿಶ್ರಾ ಅಭಿನಯದ ಈ ಚಿತ್ರ ದೊಡ್ಡ ಹಿಟ್ ಆಗದಿದ್ದರೂ, ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಇದೀಗ ಪಾಲೋ ಕೊಯೆಲ್ಹೋ ಸಹ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂಥದ್ದೊಂದು ಚಿತ್ರವನ್ನು ನಿರ್ಮಿಸಿರುವ ಶಾರೂಖ್ ಖಾನ್ ಅವರನ್ನು ಕೊಂಡಾಡುವುದರ ಜತೆಗೆ ಧನ್ಯವಾದ ಸಹ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಇಂಥದ್ದೊಂದು ಚಿತ್ರ ನಿರ್ಮಿಸಿದ್ದಿಕ್ಕೆ ಮೊದಲ ಫ್ರೇಂನಲ್ಲೇ ನಿಮಗೆ ಥ್ಯಾಂಕ್ ಯೂ ಹೇಳಲಾಗಿದೆ. ನಾನು ಸಹ ನಿಮಗೆ ಅದನ್ನೇ ಹೇಳುತ್ತಿದ್ದೇನೆ. ಎರಡು ದಿನಗಳ ಹಿಂದೆ ಬ್ರೆಜಿಲ್ ನಟರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಚಿತ್ರರಂಗ ಕಲಾವಿದರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬ ಬೇಸರದಲ್ಲಿ ಪತ್ರ ಬರೆದು ಸತ್ತು ಹೋದರು. ನಿಮ್ಮ ಚಿತ್ರ ಅದಕ್ಕೆ ಹತ್ತಿರವಾಗಿದೆ. ಕಾಮಿಡಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಈ ಚಿತ್ರ, ಕಲೆಯ ಟ್ರಾಜಿಡಿ ಎಂದರೆ ತಪ್ಪಿಲ್ಲ’ ಎಂದು ಕೊಯೆಲ್ಹೋ ಹೇಳಿದ್ದಾರೆ.

ಪಾಲೋ ತರಹದವರು ತಮಗೆ ಈ ಮಾತು ಹೇಳಿದ್ದಿಕ್ಕೆ ಖುಷಿಯಾಗಿರುವ ಶಾರೂಖ್, ಬದಲಿಯಾಗಿ ಥ್ಯಾಂಕ್ಸ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net