ಕನ್ನಡ, ತಮಿಳು... 5 ಭಾಷೆಯಲ್ಲಿಯೂ ಪರಿಣಿತರು ಈ ಶಾಲೆಯ ಮಕ್ಕಳು! ಹಳ್ಳಿ ಶಾಲಾ ಮಕ್ಕಳಿಗೆ ಶಿಕ್ಷಕರೇ ಸ್ನೇಹಿತರು | Languages

ವಿಜಯವಾಣಿ - 2025-02-18T205620.882 (1)
Published on

5 Languages: 'ಗುರುವಿಗೆ ಗುಲಾಮನಾಗವ ತನಕ ದೊರೆಯದಣ್ಣ ಮುಕುತಿ' ಎನ್ನುವ ಮಾತು ಎಂದೆಂದಿಗೂ ನಮ್ಮಲ್ಲಿ ಶಾಶ್ವತ. ಕೇವಲ ಅಂದಿನ ಕಾಲಘಟಕ್ಕೆ ಮಾತ್ರ ಸೀಮಿತವಾಗದ ಈ ಮಾತು, ಇಂದಿನ ಆಧುನಿಕ, ಡಿಜಿಟಲ್​ ಕಾಲಕ್ಕೂ ಅನ್ವಯವೇ ಸರಿ. ಅಸಲಿಗೆ ಈ ಸಾಲಿಗೆ ಯಾರು ಬದ್ಧರೋ, ಅವರಿಗೆ ಮಾತ್ರ ವಿದ್ಯೆ, ಬುದ್ಧಿ, ವಿನಯ, ಸಂಸ್ಕಾರ, ಸಂಸ್ಕೃತಿ ಒಲಿಯುವುದು ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ನಾಲ್ಕು ಅಕ್ಷರ ಕಲಿಸುವ ಗುರುಗಳು ನಮ್ಮ ಬಾಳನ್ನು ಬೆಳಗಿ, ನಮ್ಮ ಸಾಧನೆಯಲ್ಲಿ ಖುಷಿ ಕಾಣುತ್ತಾರೆ ಎನ್ನುವುದಕ್ಕೆ ಇದೊಂದು ಶಾಲೆಯೇ ಜ್ವಲಂತ ಸಾಕ್ಷಿ.

ಸಾವಿರಾರು ಬೆಳಕಿನ ದಿವಿಗೆ

ಆಂಧ್ರಪ್ರದೇಶದ ಚಿತ್ತೂರು ತಾಲೂಕಿನ ಶಾಂತಿಪುರಂ ಎಂಬ ಹಳ್ಳಿಯಲ್ಲಿರುವ ಜೆಡ್​ಪಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಾವ್ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಕೇವಲ ಪುಸ್ತಕ ಒಳನೋಟಕ್ಕೆ ಮಾತ್ರ ಸೀಮಿತಗೊಳಿಸದೆ, ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವತ್ತ ಶ್ರಮಿಸಿದರೆ, ಒಂದಲ್ಲ, ಎರಡಲ್ಲ ಬದಲಿಗೆ ಸಾವಿರಾರೂ ಬೆಳಕಿನ ದಿವಿಗೆಯನ್ನು ಹತ್ತಿಸಬಹುದು. ಈ ಶಾಲೆಯ ಶಿಕ್ಷಕರು ಕೂಡ ಇದೇ ಉದ್ದೇಶವನ್ನು ಹೊತ್ತು ಸಾಗಿದ್ದು, ತಮ್ಮ ವಿದ್ಯಾರ್ಥಿಗಳು ದೇಶದ ಪ್ರಮುಖ ಭಾಷೆಗಳಲ್ಲಿ ಪರಿಣಿತಿ ಹೊಂದಲಿ ಎಂದು ಶ್ರಮಿಸುತ್ತಿದ್ದಾರೆ.

ತೆಲುಗು, ತಮಿಳು, ಕನ್ನಡ...

ಈ ಶಾಲೆಯ ವಿದ್ಯಾರ್ಥಿಗಳು ಬಹುಭಾಷಾ ಜ್ಞಾನದಲ್ಲಿ ತಮ್ಮ ವಿಶೇಷತೆ, ಪ್ರತಿಭೆಯನ್ನು ತೋರಿಸುವಲ್ಲಿ ನಿಸ್ಸೀಮರಾಗಿದ್ದಾರೆ. ಪಠ್ಯಕ್ರಮದಲ್ಲಿ ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಜತೆ ಜತೆಗೆ ಕನ್ನಡ, ಮಲಯಾಳಂ ಭಾಷೆಗಳನ್ನು ಇಲ್ಲಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೂಲ ಭಾಷೆ ತೆಲುಗು ಆಗಿದ್ದರೂ ಸಹ ಇತರೆ ಭಾಷೆ ಕಲಿಯುವಲ್ಲಿ ಆಸಕ್ತಿ ತೋರಿರುವ ವಿದ್ಯಾರ್ಥಿಗಳು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳನ್ನು ಸುಲಭವಾಗಿ ಬರೆಯಲು, ಓದಲು ಮತ್ತು ಮಾತನಾಡಲು ಕಲಿತಿದ್ದಾರೆ. ಇದರಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ ಎಂಬುದು ಮತ್ತೊಂದು ವಿಶೇಷ.

ಮಾತೃ ಭಾಷೆಗೆ ಮಾತ್ರ ಸೀಮಿತವಾಗದೆ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಈ ಭಾಷೆಯಲ್ಲಿರುವ ಕವಿತೆಗಳು ಮತ್ತು ಬರಹಗಳನ್ನು ಮತ್ತೊಂದು ಭಾಷೆಗೆ ಅನುವಾದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದು ನಿಜಕ್ಕೂ ಗಮನಾರ್ಹ. ಮಕ್ಕಳಿಗೆ ಶಿಕ್ಷಕರೇನೋ ಹೆಚ್ಚಿನ ಸಮಯ ತೆಗೆದುಕೊಂಡು ತರಬೇತಿ ನೀಡಿದ್ದಾರೆ. ಆದರೆ, ಅವರು ಕಲಿತಿದ್ದಾರೆ? ಅನೋದಕ್ಕೆ ಗ್ಯಾರಂಟಿ ಏನು? ಅವರು ಬರೆಯಲು, ವ್ಯವಹರಿಸಲು ಸಾಧ್ಯವೇ? ಎಂಬುದನ್ನು ಪರೀಕ್ಷಿಸಲು ಒಂದು ಟೆಸ್ಟ್​ ಕೂಡ ಏರ್ಪಡಿಸಿದ್ದಾರೆ. ಅದರಲ್ಲಿ ಬಹುತೇಕ ಮಕ್ಕಳು ತಾವು ಸಮರ್ಥರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

93 ವಿದ್ಯಾರ್ಥಿಗಳು

ವಿಶೇಷ ಪರೀಕ್ಷಾ ಅಧಿಕಾರಿಗಳ ಅನುಮತಿಯೊಂದಿಗೆ, ಆಯಾ ಭಾಷೆಗಳಲ್ಲಿ ಪ್ರವೀಣರಾದ ಶಿಕ್ಷಕರು ಈ ಶಾಲೆಗೆ ಬಂದು ವಿದ್ಯಾರ್ಥಿಗಳ ಭಾಷಾ ಜ್ಞಾನದ ಕುರಿತು ವಿಶೇಷ ಪರೀಕ್ಷೆಗಳನ್ನು ನಡೆಸಿದ್ದಾರೆ. ಗುಡುಪಲ್ಲಿ ಎಪಿ ಮಾದರಿ ಶಾಲೆಯ ಶಿಕ್ಷಕರಾದ ಶಿಜೊ ಮೈಕೆಲ್ ಮಲಯಾಳಂ, ಗುಡುಪಲ್ಲಿ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ಎಚ್‌ಎಂ ಎಸ್‌.ಕೆ. ಮಣಿ ತಮಿಳು ಮತ್ತು ಕರ್ನಾಟಕದ ವೇಮನ ಶಿಕ್ಷಣ ಸಂಸ್ಥೆಗಳ ಶಿಕ್ಷಕಿಯಾದ ಎಸ್. ವನಜಾಕ್ಷಿ ಅವರು, ಭಾಷೆಯ ಕುರಿತು ಒಟ್ಟು 94 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದರು. ಇವರ ಪೈಕಿ 93 ವಿದ್ಯಾರ್ಥಿಗಳು ಕನ್ನಡದಲ್ಲಿ, 45 ಮಲಯಾಳಂ ಮತ್ತು 36 ವಿದ್ಯಾರ್ಥಿಗಳು ತಮಿಳಿನಲ್ಲಿ ತೃಪ್ತಿದಾಯಕ ಪ್ರದರ್ಶನ ನೀಡಿದ್ದಾರೆ.

ಪ್ರಾಂಶುಪಾಲರ ಸಂತಸ

ಶಾಲೆಯ ಪ್ರಾಂಶುಪಾಲರು ಹಾಗೂ ಹೆಡ್​ ಮಾಸ್ಟರ್​ ಆಗಿರುವ ಟೀಗಲ ವೆಂಕಟಯ್ಯ ಮಾತನಾಡಿ, "ಭಾಷೆಗಳ ಬಗ್ಗೆ ಆಸಕ್ತಿ ಹೊಂದಿರುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಬಹುಭಾಷಿಕರನ್ನಾಗಿ ಮಾಡುತ್ತಿದೆ. ತಮ್ಮ ಬಿಡುವಿನ ವೇಳೆಯಲ್ಲಿ ನೀಡುವ ತರಬೇತಿ ಮತ್ತು ಇತರ ಶಿಕ್ಷಕರ ಬೆಂಬಲದೊಂದಿಗೆ, ಮಕ್ಕಳು ಎಲ್ಲಾ ಭಾಷೆಗಳ ಮೇಲಿನ ತಮ್ಮ ಪಾಂಡಿತ್ಯವನ್ನು ಸುಧಾರಿಸುತ್ತಿದ್ದಾರೆ. ಮಾತೃಭಾಷೆಯನ್ನು ಕಲಿತರೆ, ನಾವು ಇತರ ಹಲವು ಭಾಷೆಗಳನ್ನು ಕಲಿಯಬಹುದು ಎಂಬ ಕಲ್ಪನೆಯೊಂದಿಗೆ ಈ ಶೈಕ್ಷಣಿಕ ವರ್ಷದ ಆರಂಭದಿಂದಲೇ ಈ ವಿಶೇಷ ಬೋಧನಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ" ಎಂದು ಹೇಳಿದರು.

6,7,8 ಮತ್ತು 9ನೇ ತರಗತಿಯ ಮಕ್ಕಳಿಗೆ ತರಗತಿ ಇಲ್ಲದಾಗ ಭಾಷಾ ಕಲಿಕೆಯ ವಿಶೇಷ ತರಗತಿಯನ್ನು ತೆಗೆದುಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಇತರ ಭಾಷೆಗಳನ್ನು ಕಲಿಯಲು ಆಸಕ್ತಿ ತೋರಿಸಿದ್ದರಿಂದ, ಸ್ವಂತ ಖರ್ಚಿನಲ್ಲಿ ಮಲಯಾಳಂ, ತಮಿಳು ಮತ್ತು ಕನ್ನಡ ಪುಸ್ತಕಗಳನ್ನು ಇಲ್ಲಿನ ಶಿಕ್ಷಕರು ಖರೀದಿಸಿದ್ದಾರೆ. ಈ ಬೆಂಬಲವನ್ನು ಪಡೆದ ಮಕ್ಕಳು ಆಯಾ ಭಾಷೆಗಳ ಮೇಲೆ ಸುಲಭವಾಗಿ ಹಿಡಿತ ಸಾಧಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net