ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ಸ್ವಾಗತಾರ್ಹ : ಎಚ್.ವಿಶ್ವನಾಥ್

Vishwanath
Published on

ಮೈಸೂರು: ರಾಜ್ಯದ ಹಲವು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಪಡೆಯಲು 5 ಕೋಟಿ ಫಿಕ್ಸ್ ಮಾಡಿದ್ದೇ ಈ ಹಿಂದಿನ ಬಿಜೆಪಿ ಸರ್ಕಾರ. ಅದು ಈಗಲೂ ಮುಂದುವರಿದಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾನೂನಿನ ಮೇಲೆ ಯಾರಿಗೂ ಭಯ ಇಲ್ಲದಂತಾಗಿದೆ. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ರಾಜಕಾರಣ ಮಾಡುತ್ತಿವೆ. ಈ ಸರ್ಕಾರವನ್ನು ರಾಜ್ಯದ ಜನರು ಆಯ್ಕೆ ಮಾಡಿದ್ದಾರೆ. ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕಾಂಗಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬಜೆಟ್ ಕುರಿತು ಶಾಸಕಾಂಗ ಒಪ್ಪಿಗೆ ನೀಡುತ್ತದೆ. ಆದರೆ ಸರ್ಕಾರ ಶಾಸಕಾಂಗ ಒಪ್ಪಿಗೆ ನೀಡಿದ ಬಜೆಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಏನು ಮಾಡಿದೆ. ಕಳೆದ ಬಾರಿಯ ಬಜೆಟ್ ಏನಾಯಿತು ಎಂದು ಪ್ರಶ್ನಿಸಿದರು.

ಪ್ರಯಾಗ್‌ರಾಜ್‌ಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಉತ್ತರಪ್ರದೇಶ ಸರ್ಕಾರ ಮಾಡಿರುವ ವ್ಯವಸ್ಥೆ ಅತ್ಯುತ್ತಮವಾಗಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿ ಇಡೀ ಕುಂಭಮೇಳದ ವ್ಯವಸ್ಥೆ ಚೆನ್ನಾಗಿದೆ. ಒಂದು ಮನೆ ನಡೆಸೋದೇ ಕಷ್ಟ. ಕೋಟ್ಯಾಂತರ ಜನರು ಭಾಗಿಯಾಗಿರುವ ಕುಂಭಮೇಳ ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ಉತ್ತರಪ್ರದೇಶ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಾಘೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುತ್ತಿಲ್ಲ. ನಮ್ಮ ಹೆಂಡ್ತಿಯರಿಗೆ ಗೃಹಲಕ್ಷ್ಮಿ ಜನೆಯ ಹಣ ಬರ್ತಿಲ್ಲ ಅಂತ ಗಂಡಂದಿರು ಹೇಳ್ತಿದಾರೆ. ಇದರಿಂದ ಮನೆಗಳು ಮುರಿದು ಹೋಗುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net