ಐಐಟಿ ಬಾಬಾ SSLC, ಪಿಯುಸಿ ಅಂಕಪಟ್ಟಿ ವೈರಲ್​! ಅಭಯ್​ ಸಿಂಗ್​ ಪಡೆದ ಮಾರ್ಕ್ಸ್​ ಎಷ್ಟು? ಇಲ್ಲಿದೆ ಉತ್ತರ | IIT Baba

ವಿಜಯವಾಣಿ - 2025-02-18T195509.439
Published on

IIT Baba: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಕ್ತಾಧಿಗಳ ಗಮನ ಸೆಳೆದ ಐಐಟಿ ಬಾಬಾ ಅಲಿಯಾಸ್​ ಅಭಯ್ ಸಿಂಗ್​, ತಮ್ಮ ಕೆಲಸ, ಉದ್ದೇಶಗಳಿಂದಲೇ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಅಧ್ಯಯನ ಮಾಡಿ ಲಕ್ಷಗಟ್ಟಲೆ ಸಂಬಳ ಬರುವ ಉದ್ಯೋಗವನ್ನು ತೊರೆದ ಅಭಯ್ ಸಿಂಗ್​, ಆಧ್ಯಾತ್ಮದತ್ತ ಮುಖ ಮಾಡಿ, ಇಂದು ಸನ್ಯಾಸತ್ವ ತೆಗೆದುಕೊಂಡಿರುವುದು ಸದ್ಯ ಅನೇಕರ ಅಚ್ಚರಿಗೆ ಕಾರಣವಾಗಿದೆ.

 ಒಂದಲ್ಲ ಒಂದು ವಿಷಯ 'ವೈರಲ್​'

ಮಹಾಕುಂಭ ಮೇಳ ಶುರುವಾದ ಮೊದಲ ದಿನದಿಂದಲೂ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಐಐಟಿ ಬಾಬಾ ಎಂದೇ ಖ್ಯಾತಿ ಪಡೆದಿರುವ ಅಭಯ್ ಸಿಂಗ್, ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನರ ಆಕರ್ಷಣಾ ಕೇಂದ್ರವಾಗಿ ಗಮನ ಸೆಳೆದರು. ಅಪಾರ ಜ್ಞಾನ, ಹಲವು ವಿದ್ಯೆಗಳಲ್ಲಿ ಪಂಡಿತರಾಗಿರುವ ಅಭಯ್ ಸಿಂಗ್, ಹೆಚ್ಚಿನ ಸಂಬಳದ ಉದ್ಯೋಗವನ್ನೆಲ್ಲ ಬಿಟ್ಟು ಆಧ್ಯಾತ್ಮದತ್ತ ಮುಖ ಮಾಡಿರುವುದು ಅವರ ಪೋಷಕರಲ್ಲಿ ಅತೀವ ದುಃಖವನ್ನು ಉಂಟುಮಾಡಿದೆ. ವಾಪಾಸ್​ ಮನೆಗೆ ಬಾ ಎಂಬ ಪೋಷಕರ ಮನವಿ ತಿರಸ್ಕರಿಸಿದ ಐಐಟಿ ಬಾಬಾ, ಅನೇಕರ ಗೊಂದಲಕ್ಕೂ ಕಾರಣರಾಗಿದ್ದಾರೆ.

ಇದೀಗ ಅಭಯ್ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ತಮ್ಮ ವೈಯಕ್ತಿಕ ಅಥವಾ ಕುಂಭಮೇಳದ ವಿಷಯಕ್ಕಾಗಿ ಅಲ್ಲ. ಬದಲಿಗೆ ತಾವು ಓದಿದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿಗಳಿಗೆ. ವಿದ್ಯಾಭ್ಯಾಸದಲ್ಲಿ ಸದಾ ಮುಂದಿದ್ದ ಐಐಟಿ ಬಾಬಾ, 10ನೇ ಕ್ಲಾಸ್​ನಲ್ಲಿ ಎಷ್ಟು ಅಂಕ ಗಳಿಸಿರಬಹುದು? ಯಾವ ವಿಷಯಗಲ್ಲಿ ಹೆಚ್ಚು ಬುದ್ಧಿವಂತರಿದ್ದರು ಎಂಬ ನೆಟ್ಟಿಗರ ಕುತೂಹಲಕ್ಕೆ ಈ ಅಂಕಪಟ್ಟಿಗಳು ಸಾಕ್ಷಿಯಾಗಿವೆ. ವರದಿಗಳ ಪ್ರಕಾರ, 10ನೇ ತರಗತಿಯಲ್ಲಿ ಶೇ.93ರಷ್ಟು ಅಂಕ ಪಡೆದಿದ್ದರೆ, ದ್ವಿತೀಯ ಪಿಯುಸಿಯಲ್ಲಿ ಶೇ. 92.4ರಷ್ಟು ಅಂಕಗಳನ್ನು ಗಳಿಸಿದ್ದಾರೆ.

ಈ ಅಂಕಗಳು ಅವರ ಬೌದ್ಧಿಕ ಸಾಮರ್ಥ್ಯವನ್ನು ಮತ್ತಷ್ಟು ಪರಿಚಯಿಸಿದೆ. ಇನ್ನು 2008ರಲ್ಲಿ ಅಭಯ್​ ಸಿಂಗ್​ ಐಐಟಿ-ಜೆಇಇ (IIT-JEE) ಪರೀಕ್ಷೆಯಲ್ಲಿ 731 ಅಖಿಲ ಭಾರತ ರ‍್ಯಾಂಕ್ (AIR) ಗಳಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಐಐಟಿ ಬಾಬಾ ಪಡೆದ ಅಂಕಗಳನ್ನು ಕಂಡ ನೆಟ್ಟಿಗರು, ಜಾಲತಾಣಗಳಲ್ಲಿ ಅವರ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ.

4 ವರ್ಷಗಳ ಪ್ರೇಮ​!

ಇನ್ನು ಎಲ್ಲರಂತೆಯೇ ತಾವು ಕೂಡ ಪ್ರೀತಿಯಲ್ಲಿ ಬಿದ್ದಿದ್ದ ಐಐಟಿ ಬಾಬಾ, ನಾಲ್ಕು ವರ್ಷಗಳ ಕಾಲ ಪ್ರೀತಿಯ ಸಂಬಂಧದಲ್ಲಿದ್ದರು. ಆದರೆ, ಪೋಷಕರ ಜತೆಗಿನ ವಿವಾದಗಳಿಂದಾಗಿ ತಮ್ಮ ಪ್ರೇಮ ಸಂಬಂಧಕ್ಕೆ ಗುಡ್​ಬೈ ಹೇಳಿದರು. ಪ್ರೀತಿಯನ್ನು ಮಾತ್ರ ತ್ಯಜಿಸದ ಅಭಯ್ ಸಿಂಗ್​, ತಮ್ಮ ಇತರೆ ಆಸೆಗಳನ್ನು ತೊರೆದು ಸಂಪೂರ್ಣವಾಗಿ ಆಧ್ಯಾತ್ಮಿಕತೆಯ ಕಡೆ ವಾಲಿದರು. ಅಂದಿನಿಂದ ಇಂದಿನವರೆಗೂ ಕುಟುಂಬದತ್ತ ತಿರುಗಿ ನೋಡದ ಬಾಬಾ, ಸದ್ಯ ಅವರ ಪೋಷಕರ ಕಣ್ಣೀರಿಗೆ ಕಾರಣವಾಗಿದ್ದಾರೆ. ನನ್ನ ಇಡೀ ಜೀವನವನ್ನು ಶಿವನಿಗೆ ಅರ್ಪಿಸಿರುವುದಾಗಿ ಅಭಯ್​ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಏಕಾಂತ ಜೀವನ

“ಹೆತ್ತವರ ನಿರಂತರ ಜಟಾಪಟಿಗಳು ನನ್ನನ್ನು ಆಘಾತಕ್ಕೆ ದೂಡಿತು. ಬಾಲ್ಯದ ಬೆಳವಣಿಗೆಯಲ್ಲಿ ಮನೆಯಲ್ಲಿನ ಕಲಹಗಳಿಂದ ತಪ್ಪಿಸಿಕೊಳ್ಳಲು ನಾನು ತಡರಾತ್ರಿಯಲ್ಲಿ ಓದುತ್ತಿದ್ದೆ. ಇಂದು ನಾನು ಮದುವೆಯಾಗದಿರಲು ಪೋಷಕರ ಜಗಳಗಳೇ ಕಾರಣ. ಅದನ್ನೆಲ್ಲ ಕಣ್ಣಿಂದ ನೋಡಿದ ಮೇಲೆ ದಾಂಪತ್ಯ ಜೀವನದಿಂದ ದೂರ ಉಳಿಯಬೇಕು ಅನಿಸಿತು. ನೆಮ್ಮದಿ,ಶಾಂತಿ, ಏಕಾಂತ ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದೆನಿಸಿತು. ಹೀಗಾಗಿ ಸನ್ಯಾಸತ್ವ ತೆಗೆದುಕೊಂಡೆ” ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net