ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಕ್ಷಿತ್ ಶೆಟ್ಟಿ ಅಭಿನಯದ, ಹೇಮಂತ್ ರಾವ್ ನಿರ್ದೇಶನದ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗಿನಲ್ಲಿ ರಿಲೀಸ್‌ಗೆ ರೆಡಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತೆಲುಗು ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕೆಲ ದಿನಗಳಿಂದ ಚಿತ್ರವನ್ನು ತೆಲುಗಿನಲ್ಲೂ ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದರು. ಅವರಿಗೆ ಮಣಿದು ಚಿತ್ರತಂಡ ತೆಲುಗಿನಲ್ಲಿ ರಿಲೀಸ್ ಮಾಡಲು ಮನಸ್ಸು ಮಾಡಿದೆ. ಸೆ. 1ರಂದು ಕನ್ನಡದಲ್ಲಿ ಬಿಡುಗಡೆಯಾದ ‘ಸೈಡ್ ಎ’, ಇದೇ 22ರಂದು ಟಾಲಿವುಡ್‌ನಲ್ಲಿ ‘ಸಪ್ತ ಸಾಗರಾಲು ದಾಟಿ’ ಟೈಟಲ್‌ನಲ್ಲಿ ರಿಲೀಸ್ ಆಗಲಿದೆ. ‘ಸಪ್ತಸಾಗರದಾಚೆ ಎಲ್ಲೋ – ಸೈಡ್ ಬಿ’, ಮೊದಲ ಭಾಗ ರಿಲೀಸ್ ಆದ 50 ದಿನಗಳ ಬಳಿಕ ಅರ್ಥಾತ್ ಅ. 20ರಂದು ತೆರೆಗೆ ಬರಲಿದೆ. ರಕ್ಷಿತ್ ಶೆಟ್ಟಿಗೆ ರುಕ್ಮಿಣಿ ವಸಂತ್ ನಾಯಕಿಯಾಗಿದ್ದು, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೆತ ಗುರುಮೂರ್ತಿ ಛಾಯಾಗ್ರಾಹಣವಿದೆ.
ಇದನ್ನೂ ಓದಿ : ನನಗೆ 15 ಗಂಡಂದಿರಿದ್ದಾರೆ ಎಂದು ಭಾವಿಸಿ ನಟಿಸಿದೆ! ಹಳೇ ಕ್ಷಣವನ್ನು ಮತ್ತೆ ಮೆಲಕು ಹಾಕಿದ ಅಮಲಾ

‘ಟೋಬಿ’ ಬೆಂಬಲಕ್ಕೆ ದುಲ್ಕರ್ ಸಲ್ಮಾನ್
ಅತ್ತ ತೆಲುಗಿನಲ್ಲಿ ಅಬ್ಬರಿಸಲು ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಸಿದ್ಧತೆ ನಡೆಸಿದ್ದರೆ, ಇತ್ತ ‘ಟೋಬಿ’ ಮಾಲಿವುಡ್‌ನತ್ತ ಮುಖ ಮಾಡಿದೆ. ಕಳೆದ ಆ. 25ರಂದು ರಾಜ್ ಬಿ. ಶೆಟ್ಟಿ ಅಭಿನಯದ ‘ಟೋಬಿ’ ಕನ್ನಡದಲ್ಲಿ ರಿಲೀಸ್ ಆಗಿತ್ತು. ಇದೀಗ ಸೆ. 22ರಂದು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಮಾಲಿವುಡ್ ಸ್ಟಾರ್ ದುಲ್ಕರ್ ಸಲ್ಮಾನ್ ಅವರ ವೇೇರರ್ ಫಿಲಂಸ್ ಕನ್ನಡದ ‘ಟೋಬಿ’ಯನ್ನು ಮಲಯಾಳಂನಲ್ಲಿ ವಿತರಿಸಲು ಮುಂದಾಗಿದೆ. ಈಗಾಗಲೇ ರಾಜ್ ಬಿ. ಶೆಟ್ಟಿ ಮತ್ತು ತಂಡ ಕೇರಳದಲ್ಲಿ ಪ್ರಚಾರ ಆರಂಭಿಸಿದೆ.
ಇದನ್ನೂ ಓದಿ : ಜೈಲರ್ ಚಿತ್ರಕ್ಕಾಗಿ ವಿನಾಯಕನ್ಗೆ ಸಿಕ್ಕ ಸಂಭಾವನೆ ಎಷ್ಟು? ಇಷ್ಟು ಕಡಿಮೆ ಹಣ ಪಡೆದ್ರಾ ವರ್ಮನ್?

ಬಸಿಲ್ ಆ್ಯಕ್ಷನ್ ಕಟ್ ಹೇಳಿರುವ ಆ್ಯಕ್ಷನ್ ಡ್ರಾಮಾ ಥ್ರಿಲ್ಲರ್ ‘ಟೋಬಿ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿಗೆ ಚೈತ್ರಾ ಆಚಾರ್ ನಾಯಕಿಯಾಗಿದ್ದಾರೆ. ಜತೆಗೆ ಸಂಯುಕ್ತಾ ಹೊರನಾಡು, ದೀಪಕ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಭರತ್, ಸಂಧ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಿದುನ್ ಮುಕುಂದನ್ ಸಂಗೀತ, ಪ್ರವೀಣ್ ಶ್ರಿಯನ್ ಛಾಯಾಗ್ರಹಣ ಮತ್ತು ಸಂಕಲನದಲ್ಲಿ ಚಿತ್ರ ಮೂಡಿಬಂದಿದೆ.

