

ಬೆಂಗಳೂರು: ತೆಲುಗು ಸಿನಿಮಾ ರಂಗದಲ್ಲಿ ಅನನ್ಯ ಸೇವೆಗೈದ ಸಾಧಕರಿಗೆ ಕೊಡ ಮಾಡುವ ನಂದಿ ಪ್ರಶಸ್ತಿ ಈಗ ಕನ್ನಡದಲ್ಲಿಯೂ ಪ್ರಾರಂಭವಾಗುತ್ತಿದೆ. ಅದರ ಮೊದಲ ಭಾಗ ಎನ್ನುವಂತೆ ನಂದಿ ಪ್ರಶಸ್ತಿಯ ಲಾಂಛನ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದರ ಲೋಗೋ ಲಾಂಚ್ ಮಾಡಿ ಶುಭ ಕೋರಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್ ನೇತೃತ್ವದಲ್ಲಿ ನಿನ್ನೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಲೋಗೋ ಅನಾವರಣ ಮಾಡಿಸಿದ್ದಾರೆ. ಅನಿತಾ ರೆಡ್ಡಿ, ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್, ಭಾಮಾ ಗಿರೀಶ್, Aiplex ಗಿರೀಶ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂದಿ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕೆಂದು ಸಿನಿಮಾ ರಂಗದ ಸ್ನೇಹಿತರ ಜತೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ ಎಂದು ಅಧ್ಯಕ್ಷ ಭಾ.ಮಾ.ಹರೀಶ್ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಪ್ರತಿ ವರ್ಷ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ನಂದಿ ಪ್ರಶಸ್ತಿ ನೀಡಲಾಗುತ್ತದೆ.
ಸದ್ಯ ನಂದಿ ಪ್ರಶಸ್ತಿ ಲೋಗೋ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪುರೇಷೆಗಳನ್ನು ತಿಳಿಸಲಾಗುತ್ತದೆ. ಸೈಮಾ, ಫಿಲಂಫೇರ್ ಮಾದರಿಯಲ್ಲಿಯೇ ಕನ್ನಡ ಸಿನಿಮಾರಂಗಕ್ಕೆ ಪ್ರತ್ಯಕ್ಷ ಪ್ರಶಸ್ತಿ ನಂದಿ ಎಂದು ಭಾ.ಮಾ.ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.