

ಮಂಗಳೂರು: ಸಾರ್ವಜನಿಕರು ಕುಸಿದು ಬಿದ್ದು, ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಇಂದು ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿ ಇದ್ದಾಗಲೇ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಉರ್ವ ಮಾರಿಗುಡಿ ನಿವಾಸಿ, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಬಿ.ಯು. ರಾಜೇಶ್ (45) ಸಾವಿಗೀಡಾದವರು. ಇವರು ಇಂದು ಮಧ್ಯಾಹ್ನ ವೇಳೆ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಎದೆನೋವಿಗೆ ಒಳಗಾಗಿದ್ದರು.
ತಕ್ಷಣ ವಿಶ್ರಾಂತಿ ಪಡೆಯಲೆಂದು ರೆಸ್ಟ್ ರೂಮ್ಗೆ ತೆರಳಿದ ಅವರು ಅಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದರು. 1993ನೇ ಬ್ಯಾಚ್ ಪೊಲೀಸ್ ಆಗಿರುವ ರಾಜೇಶ್, ಈ ಹಿಂದೆ ಸುರತ್ಕಲ್ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು.