More

    ಮನುಷ್ಯರ ಬಳಕೆಗೆ ಪಶುಗಳ ಔಷಧ ಪೂರೈಕೆ!

    | ಹರೀಶ್ ಬೇಲೂರು, ಬೆಂಗಳೂರು

    ಸರ್ಕಾರಿ ಆಸ್ಪತ್ರೆಗಳಿಗೆ ಕೋಟ್ಯಂತರ ರೂ. ಮೌಲ್ಯದ ಕಳಪೆ ಗ್ಲೂಕೋಸ್ ಪೂರೈಸಿ ಎಡವಟ್ಟು ಮಾಡಿಕೊಂಡಿದ್ದ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್​ಎಂಎಸ್​ಸಿಎಲ್) ಇದೀಗ ಇನ್ನೊಂದು ಭಾರಿ ಪ್ರಮಾದ ಮಾಡಿದೆ. ಪಶುಗಳಿಗೆ ಬಳಸುವ ಔಷಧವನ್ನು ಮನುಷ್ಯರ ಬಳಕೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗುವ ಮುನ್ನವೇ ಎಚ್ಚೆತ್ತುಕೊಂಡು ಪೂರೈಕೆಯಾಗಿರುವ ಔಷಧವನ್ನು ವಾಪಸ್ ಕಳುಹಿಸಲು ಆರೋಗ್ಯ ಇಲಾಖೆ ಆದೇಶಿಸಿದೆ.

    ಕಣ್ಣು, ಕಿವಿ, ಮೂಗಿಗೆ ಸಂಬಂಧಪಟ್ಟಂತೆ ವಿವಿಧ ಔಷಧ ಖರೀದಿಗಾಗಿ ನಿಗಮವು 2023ರ ಆಗಸ್ಟ್​ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಟೆಂಡರ್ ಪಡೆದ ಖಾಸಗಿ ಕಂಪನಿ, ಕೋಟ್ಯಂತರ ರೂ. ಮೌಲ್ಯದ ಪಶುಗಳಿಗೆ ಬಳಸುವ ಔಷಧವನ್ನು ನಿಗಮಕ್ಕೆ ಪೂರೈಸಿ ಎಡವಟ್ಟು ಮಾಡಿದೆ. ನಿಗಮ ಇದನ್ನು ಗಮನಿಸದೆ ಎಲ್ಲ ಔಷಧಗಳನ್ನು ಔಷಧ ಉಗ್ರಾಣ ಮೂಲಕ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿದೆ. ಆದರೆ, ಖಾಸಗಿ ಕಂಪನಿ ಪೂರೈಸಿದ್ದ ಔಷಧದ ಮೇಲಿನ ಲೇಬಲ್​ನಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಹೆಸರು ಇದೆ. ಅದನ್ನು ಮರೆಮಾಚಿ ಪೂರೈಸಲಾಗಿದೆ. ಕೆಲವೊಂದು ಔಷಧಗಳ ಲೋಗೋಗ್ರಾಂ ವಿನ್ಯಾಸಕ್ಕೆ ಮಾಸ್ಕಿಂಗ್ (ಮರೆಮಾಚುವಿಕೆ) ಮಾಡಿ ಕಳುಹಿಸಲಾಗಿದೆ. ಇಂತಹ ಔಷಧಗಳನ್ನು ಹಿಂಪಡೆಯುವಂತೆ ಕೊಡಗಿನ ಔಷಧ ಉಗ್ರಾಣದವರು ಮೈಸೂರು ಮತ್ತು ಕೊಡಗು ಜಿಲ್ಲೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ವಿಜಯವಾಣಿಗೆ ಲಭ್ಯವಾಗಿದೆ.

    ಪ್ರಯೋಗಾಲಯದಲ್ಲಿಯೂ ಪತ್ತೆ: ನಿಗಮಕ್ಕೆ ಸರಬರಾಜು ಮಾಡಿರುವ ಔಷಧಗಳನ್ನು ಔಷಧ ನಿಯಂತ್ರಣ ಇಲಾಖೆ, ಔಷಧ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದೆ. ಈ ವೇಳೆ ಪ್ರಯೋಗಾಲಯದಲ್ಲಿ ನೂರಾರು ಔಷಧಗಳು ಉತ್ತಮ ಗುಣಮಟ್ಟದ್ದಲ್ಲ ಎಂದು ಪತ್ತೆಯಾಗುತ್ತಿದೆ. ಎನ್​ಎಸ್​ಕ್ಯೂ ಆಗಿರುವ ಔಷಧ ಬಗ್ಗೆ ವೆಬ್​ಸೈಟ್​ನಲ್ಲಿ ಪ್ರಕಟಿಸಿ ನಾರ್ಕೇಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್​ಸ್ಟನ್ಸ್ (ಎನ್​ಡಿಪಿಎಸ್) ಅಡಿ ಕಂಪನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ ಶಿಫಾರಸು ಮಾಡುತ್ತಿದೆ. ಕೆಲ ಕಂಪನಿಗಳು ಅಧಿಕಾರಿಗಳ ಜತೆ ಶಾಮೀಲಾಗಿ ಫೇಲ್ ಆಗಿರುವ ಔಷಧಗಳನ್ನು ಪಾಸ್ ಮಾಡಿಸುತ್ತಿರುವ ಬಗ್ಗೆಯೂ ಗುರುತರ ಆರೋಪಗಳಿವೆ.

    ಪೂರೈಸಬೇಕಿದ್ದ ಔಷಧಗಳೇನು?: ಟೆಂಡರ್ ಪಡೆದ ಕಂಪನಿ ನಿಯಮದಂತೆ ಸೋಡಿಯಂ ಕ್ಲೋರೈಡ್(ನಾಸಲ್) ಡ್ರಾಪ್ಸ್, ಟಿಮೊಲೊಲ್ ಮಲೇಟ್ (ಡ್ರಾಪ್ಸ್), ಆಕ್ಸಿಮೆಟಾಜೋಲಿನ್ ಪೀಡಿಯಾಟ್ರಿಕ್ (ನಾಸಲ್), ರ್ಫÉಪ್ರೋಫೇನ್ ( ಐ-ಡ್ರಾಪ್ಸ್), ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್(ನಾಸಲ್) ಹಾಗೂ ಕಾರ್ಬಾಕ್ಸಿಮಿಥೈಲ್​ಲ್ಯುಲೋಸ್ (ಐ ಡ್ರಾಪ್ಸ್) ಔಷಧಗಳನ್ನು ಸರಬರಾಜು ಮಾಡಬೇಕಿತ್ತು. ಕಣ್ಣು, ಮೂಗು, ಕಿವಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಔಷಧಗಳನ್ನು ನೀಡಲಾಗುತ್ತದೆ. ಮನುಷ್ಯನಿಗೆ ನೀಡುವ ಯಾವುದೇ ಔಷಧಗಳ ಲೋಗೋಗ್ರಾಂ ಮೇಲೆ ‘ಕೆಎಸ್​ಎಂಎಸ್​ಸಿಎಲ್-ನಾಟ್ ಫಾರ್ ಸೇಲ್’ ಎಂದು ನಮೂದಿಸಲಾಗುತ್ತದೆ.

    ಪೂರೈಸಿದ ಔಷಧ ಯಾವುದು?: ಪ್ರಾಣಿಗಳಿಗೆ ನೀಡುವ ಔಷಧ ಲೋಗೋಗ್ರಾಂ ಮೇಲೆ ಪಶುಸಂಗೋಪನೆ-ನಾಟ್ ಫಾರ್ ಸೇಲ್’ ಎಂದು ಉಲ್ಲೇಖಿಸಲಾಗಿದೆ. ನಿಗಮಕ್ಕೆ ಕಂಪನಿ ಬರೆದಿರುವ ಪತ್ರದಲ್ಲಿ ‘ಎಎಚ್​ವಿಎಸ್’ ಲೇಬಲ್ ಹೊಂದಿರುವ ಔಷಧಗಳನ್ನು ಪೂರೈಸಿದ್ದೇವೆ ಎಂದು ಹೇಳಿದೆ. ನಂತರ, ನಿಗಮವು ಕಂಪನಿಗೆ ಬರೆದಿರುವ ಪತ್ರದಲ್ಲಿ ಔಷಧ ಉಗ್ರಾಣಗಳಲ್ಲಿ ಸರಬರಾಜು ಮಾಡಿರುವ ಔಷಧದ ದೋಷಪೂರಿತ ಲೇಬಲ್ ಸರಿಪಡಿಸಿದ ನಂತರವೇ ಬಿಲ್​ಗಳಿಗೆ ಹಣ ಪಾವತಿಸುವುದಾಗಿ ಉಲ್ಲೇಖ ಮಾಡಿದೆ.

    ಕಳಪೆ ಔಷಧ ಕೊಟ್ಟಿದ್ದ ನಿಗಮ: 2015-16ರಿಂದ 2023-24ರವೆರೆಗೆ ನಿಗಮಕ್ಕೆ ಗ್ಲೂಕೋಸ್, ಚುಚ್ಚುಮದ್ದು, ಮಾತ್ರೆ, ವಿಟಮಿನ್ ‘ಸಿ’ ಟ್ಯಾಬ್ಲೆಟ್, ಸ್ಯಾನಿಟೈಸರ್, ಕಣ್ಣು, ಕಿವಿಗೆ ಹಾಕುವ ಡ್ರಾಪ್ಸ್ ಸೇರಿ ವಿವಿಧ ಬಗೆಯ 11 ಕಳಪೆ ಔಷಧ ಸರಬರಾಜು ಮಾಡಿರುವುದು ಬಹಿರಂಗವಾಗಿದೆ. 2018ರಿಂದ 2022-23ರವರೆಗೆ ಕಳಪೆ ಮತ್ತು ನಕಲಿ ಔಷಧ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ 25 ಔಷಧ ತಯಾರಿಕ ಕಂಪನಿಗಳನ್ನು ಕಪು್ಪಪಟ್ಟಿಗೆ ಸೇರಿಸಲಾಗಿದೆ.

    ಎಡವಟ್ಟು ಆಗಿದ್ದೆಲ್ಲಿ?

    . ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮದ ಪ್ರಕಾರ ಔಷಧಗಳ ಲೇಬಲ್ ತಿರುಚುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ

    . ಮಾಸ್ಕಿಂಗ್ ಮತ್ತು ಟ್ಯಾಂಪರಿಂಗ್ ಆದೇಶ ಹೊರಡಿಸುವ ಅಧಿಕಾರವೂ ಇಲ್ಲ

    . ಲೇಬಲ್ ಮರೆಮಾಚುವ, ತಿರುಚಲು ಸೂಚನೆ ನೀಡುವ ಅಧಿಕಾರ ನಿಗಮಕ್ಕಿಲ್ಲ

    . ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಉಲ್ಲಂಘಿಸಿ ಮಾಸ್ಕಿಂಗ್, ಟ್ಯಾಂಪರಿಂಗ್ ಆದೇಶ

    . ಕಂಪನಿಗೆ ನೀಡಿದ್ದ ಪತ್ರದಲ್ಲಿ ಲೇಬಲ್ ಮರೆ ಮಾಚಲು ಅನುಮತಿ ಕೊಟ್ಟ ನಿಗಮದ ಎಂಡಿ

    . ಕಂಪನಿ ವಿರುದ್ಧ ಕ್ರಮ ಕೈಗೊಂಡು ಕಪು್ಪಪಟ್ಟಿಗೆ ಸೇರಿಸಬೇಕಿದ್ದ ನಿಗಮ ಸುಮ್ಮನಾಗಿದೆ

    . ಪ್ರಾಣಿಗಳ ಬಳಕೆ ಔಷಧ ಸರಬರಾಜಿಗೆ ನಿಗಮದ ಅಧಿಕಾರಿಗಳಿಗೆ ಲಂಚದ ಆರೋಪ

    . ಈ ಕುರಿತು ಔಷಧ ನಿಯಂತ್ರಣ ಇಲಾಖೆಯಲ್ಲಿ ದೂರು ದಾಖಲಾಗಿದೆ.

    ಕಣ್ಣು, ಕಿವಿ, ಮೂಗು ತೊಂದರೆಗೆ ಬಳಸುವ ಔಷಧ ಸರಬರಾಜು ಕುರಿತು ವರದಿ ನೀಡುವಂತೆ ಕೆಎಸ್​ಎಂಎಸ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದೇನೆ. ಇದರಲ್ಲಿ ತಪು್ಪ ಕಂಡುಬಂದರೆ ಮುಲಾಜಿಲ್ಲದೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಬ್ಯಾಚ್ ಪರೀಕ್ಷಿಸಿದ ಬಳಿಕ ನಿಗಮ ಉಗ್ರಾಣಗಳಿಗೆ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು.

    | ಡಿ.ರಂದೀಪ್. ಆರೋಗ್ಯ ಇಲಾಖೆ ಆಯುಕ್ತ

    ಪಾಕ್ ಬಳಿ ಅಣುಬಾಂಬ್ ಇದೆ ಅದನ್ನು ನಿರ್ವಹಿಸಲು ದುಡ್ಡಿಲ್ಲ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts