More

  ಭಾರತದ ಮುನ್ನಡೆಗೆ ಬೇಕು ಕೌಶಲ ವೃದ್ಧಿ   ಯುವಜನೋತ್ಸವದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅನಿಸಿಕೆ

  ದಾವಣಗೆರೆ: ಇಪ್ಪತ್ತೊಂದನೇ ಶತಮಾನದಲ್ಲಿ ಭಾರತದ ಮುನ್ನಡೆಗೆ ಯುವಕರೇ ಶಕ್ತಿಕೇಂದ್ರವಾಗಿದ್ದು, ಕೌಶಲ ವೃದ್ಧಿ ಹಾಗೂ ಉನ್ನತ ಶಿಕ್ಷಣದ ಮೂಲಕ ಸಮರ್ಥ ಜೀವನ ಕಂಡುಕೊಳ್ಳಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.
  ಶಿವಗಂಗೋತ್ರಿಯ ದಾವಣಗೆರೆ ವಿವಿಯ ಎಂಬಿಎ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಮಟ್ಟದ ಯುವಜನೋತ್ಸವ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಶಿಕ್ಷಣ ಎಂಬುದು ಪಠ್ಯದ ಕಲಿಕೆಗೆ ಸೀಮಿತವಾಗಿರದೆ ಸಮಾಜದ ಎಲ್ಲ ಹಂತಗಳ ಪರಿಚಯಕ್ಕೆ ಅಗತ್ಯವಾಗಿದೆ. ಕಲಿಕೆ ಜತೆಯಲ್ಲೇ  ಸಾಮಾಜಿಕ ಜವಾಬ್ದಾರಿ ತಿಳಿಸುವ ಮೌಲ್ಯಯುತ ಶಿಕ್ಷಣದ ಅನಿವಾರ್ಯತೆ ಇಂದು ಹೆಚ್ಚಿದೆ ಎಂದು ತಿಳಿಸಿದರು.
  ವಿದ್ಯಾರ್ಥಿಗಳ ಜೀವನ ಬಿಳಿ ಹಾಳೆಯಾಗಿದ್ದು, ಉತ್ಕೃಷ್ಟ, ಆದರ್ಶ ವಿಷಯಗಳಡಿ ಉತ್ತಮ ಬದುಕು ನಡೆಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಅನುಪಾಲನೆ ಶಾರೀರಿಕ ಹಾಗೂ ಮಾನಸಿಕ ದೃಢತೆಗೆ ನೆರವಾಗಲಿದೆ. ಇಂದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕ್ರೀಡಾಂಗಣಕ್ಕೆ ಕಳಿಸುವತ್ತಲೂ ಪಾಲಕರು ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು.
  ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ  ಮಹಾತ್ಮ ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಧ್ಯೇಯ ಎಲ್ಲರಲ್ಲೂ ಬರಬೇಕು. ಜೀವನದ ಪ್ರತಿ ಹಂತದಲ್ಲಿಯೂ ಪರಹಿತ ಬಯಸುವ, ಸಂಕಷ್ಟಕ್ಕೆ ನೆರವಾಗುವ ಮನೋಭಾವ ಬೇಕು. ಮೌಲ್ಯಾಧಾರಿತ ಜೀವನವು ಸಾರ್ಥಕತೆಗೆ ದಾರಿ ಎಂದು ಹೇಳಿದರು.
  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವವಿದ್ಯಾನಿಲಯ ಪಟ್ಟಿಯಲ್ಲಿ ದಾವಣಗೆರೆ ವಿವಿಯೂ ಇರುವುದು ಹೆಮ್ಮೆಯ ವಿಚಾರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್-ಗೈಡ್ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
  ಎನ್‌ಎಸ್‌ಎಸ್ ಪ್ರಾಂತೀಯ ನಿರ್ದೇಶಕ ಡಿ.ಕಾರ್ತಿಕೇಯನ್, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಎನ್‌ಎಸ್‌ಎಸ್ ಅಧಿಕಾರಿ ವೈ.ಎಂ.ಉಪ್ಪಿನ್,. ಕುಲಸಚಿವ ಡಾ.ಸಿ.ಕೆ. ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ, ದಾವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಅಶೋಕ್‌ಕುಮಾರ್ ಪಾಳೇದ ಇತರರಿದ್ದರು.
  200 ವಿದ್ಯಾರ್ಥಿಗಳು ಭಾಗಿ
  ಕರ್ನಾಟಕ ಸರ್ಕಾರ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿರುವ ಏಳು ದಿನದ ಯುವಜನೋತ್ಸವದಲ್ಲಿ ವಿವಿಧ ಜಿಲ್ಲೆಗಳ 200 ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪ್ರಬಂಧ, ರಸಪ್ರಶ್ನೆ, ಪ್ರಹಸನ, ಚಿತ್ರಕಲೆ, ನೃತ್ಯ ಸ್ಪರ್ಧೆ, ವಸ್ತು ಪ್ರದರ್ಶನ, ಸುಗಮ ಸಂಗೀತ ಹಾಗೂ ಚರ್ಚಾ ಸ್ಪರ್ಧೆಗಳು ನಡೆಯಲಿವೆ.

  See also  ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನ ಸೈಕ್ಲಿಂಗ್ ಸ್ಪರ್ಧೆ- ದಾವಣಗೆರೆಯ ಸುಶ್ರುತ್ ಗೆ ಚಿನ್ನ


  ಅಧಿಕಾರ-ಹಣ, ಅಂತಸ್ತಿಗಿಂತಲೂ ಮಾನವೀಯತೆ ಮತ್ತು ವ್ಯಕ್ತಿತ್ವವೇ ಮುಖ್ಯವಾಗಿವೆ. ವ್ಯಕ್ತಿತ್ವವೇ ನಮ್ಮ ದೊಡ್ಡ ಆಸ್ತಿಯಾಗಿದೆ. ನಾನು ಚಿತ್ರನಟನಾಗಿ ಪ್ರಸಿದ್ಧಿ ಪಡೆದಿದ್ದರೂ ರೈತನಾಗಿಯೂ ಜೀವನ ಸಾಗಿಸುತ್ತಿದ್ದೇನೆ. ವಿದ್ಯಾರ್ಥಿಗಳು ಯಾವುದೇ ಕೆಲಸವನ್ನೂ ಆತ್ಮತೃಪ್ತಿಯಿಂದ ಮಾಡಬೇಕು. ಅಲ್ಲಿ ಪ್ರತಿಷ್ಠೆ, ಅಹಂಭಾವ ಬೇಕಿಲ್ಲ.
  ನೀರ್ನಳ್ಳಿ ರಾಮಕೃಷ್ಣ
  ಚಿತ್ರನಟ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts