ಪಾಕ್ ಬಳಿ ಅಣುಬಾಂಬ್ ಇದೆ ಅದನ್ನು ನಿರ್ವಹಿಸಲು ದುಡ್ಡಿಲ್ಲ: ಪ್ರಧಾನಿ ಮೋದಿ

modi
Published on

ನವದೆಹಲಿ: ಪಾಕಿಸ್ತಾನದ ಬಳಿ ಅಣು ಬಾಂಬ್‌ಗಳಿವೆ, ಭಯವಿರಲಿ' ಎಂಬ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪಾಕ್ ಬಳಿ ಅಣುಬಾಂಬ್‌ ಇದೆ. ಆದರೆ ಅದನ್ನು ನಿರ್ವಹಿಸಲು ಅವರ ಬಳಿ ಹಣವಿಲ್ಲ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ ಅವರು, ‘ಪಾಕ್ ಬಳಿ ಅಣುಬಾಂಬ್ ಇದೆ ಎಂದು ಕಾಂಗ್ರೆಸ್ ಹೇಳುತ್ತಿದೆ, ಆದರೆ ಅದನ್ನು ನಿರ್ವಹಿಸಲು ಪಾಕಿಸ್ತಾನದ ಬಳಿ ಹಣವಿಲ್ಲ ಎಂಬುದು ಪಕ್ಷಕ್ಕೆ ತಿಳಿದಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಟೀಕಿಸಿದರು.

370ನೇ ವಿಧಿಯನ್ನು ಮರುಸ್ಥಾಪಿಸಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಇದೇ ವೇಳೆ ಆರೋಪಿಸಿದ ಮೋದಿ, ಕಾಂಗ್ರೆಸ್ 370 ನೇ ವಿಧಿಯನ್ನು ಮತ್ತೆ ಹಿಂಪಡೆಯುವುದಾಗಿ ಹೇಳುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ವಿವಾದಾತ್ಮಕ ನಿಬಂಧನೆಯ ಬಗ್ಗೆ ಪಕ್ಷದ ನಿಲುವನ್ನು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.‌

ಎರಡು ರಕ್ಷಣಾ ಕಾರಿಡಾರ್‌ಗಳನ್ನು ಘೋಷಿಸಿದ ಮೋದಿ, ಬುಂದೇಲ್‌ಖಂಡ್‌ನಲ್ಲಿ ಯುವಕರ ವಲಸೆಯನ್ನು ತಡೆಗಟ್ಟುವ ಮತ್ತು ಈ ಪ್ರದೇಶವನ್ನು ಉದ್ಯಮ ಮತ್ತು ಉದ್ಯೋಗದ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದುವುದಾಗಿ ಘೋಷಿಸಿದರು.

ಲೋಕಸಭೆ ಚುನಾವಣೆ ಸಮಯದಲ್ಲೇ ಕಾಂಗ್ರೆಸ್‌ ನಾಯಕರು ಒಬ್ಬರ ನಂತರ ಒಬ್ಬರಂತೆ ವಿವಾದಿತ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಸ್ಯಾಮ್ ಪಿತ್ರೋಡಾ ನಂತರ ಇದೀಗ ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕೂಡ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ರಾಜಕೀಯ ಸಂಚಲನವನ್ನು ಸೃಷ್ಟಿಸಿತ್ತು.

ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು, ಏಕೆಂದರೆ ಅದು ಪರಮಾಣು ಬಾಂಬ್ ಅನ್ನು ಹೊಂದಿದೆ. ನಾವು ಅವರನ್ನು ಗೌರವಿಸದಿದ್ದರೆ ಮತ್ತು ಮಾತುಕತೆ ನಡೆಸದಿದ್ದರೆ, ಅವರು ಭಾರತದ ವಿರುದ್ಧ ಅಣುಬಾಂಬ್ ಪ್ರಯೋಗಿಸಲು ಯೋಚಿಸುತ್ತಾರೆ. ಕಾಂಗ್ರೆಸ್​ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಈ ಹೇಳಿಕೆಯು ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net