More

    ರಾಜ್ಯದಲ್ಲಿ ಕೈಮೀರಿದ ಕ್ರೖೆಂ

    ಕೊಲೆ, ಅತ್ಯಾಚಾರ, ಡ್ರಗ್ಸ್ ಮಾಫಿಯಾ, ಸೈಬರ್ ಅಪರಾಧ ಹೆಚ್ಚಳ | ಎಸ್​ಸಿಆರ್​ಬಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದಲೇ ದೃಢ

    | ಮಂಜುನಾಥ ಕೆ. ಬೆಂಗಳೂರು

    ಹುಬ್ಬಳ್ಳಿ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ನೇಹಾ ಹತ್ಯೆ ಹಾಗೂ ಮನೆಗೆ ನುಗ್ಗಿ ಯುವತಿ ಅಂಜಲಿ ಹತ್ಯೆ, ಕೊಡಗಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿಯ ಕತ್ತು ಕತ್ತರಿಸಿ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೈಮೀರಿರುವ ಬಗ್ಗೆ ಚರ್ಚೆ ಶುರುವಾಗಿದೆ. ಕಳೆದ 4 ತಿಂಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವ ವಿಚಾರವೂ ಆತಂಕ ಹೆಚ್ಚಿಸಿದೆ. ಅಪರಾಧ ತಡೆಗಟ್ಟಲು ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು ಎಂದು ವಿರೋಧ ಪಕ್ಷಗಳು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಆಗ್ರಹಿಸಿದ್ದಾರೆ.

    ರಾಜ್ಯ ಕ್ರೖೆಂ ರೆಕಾರ್ಡ್ ಬ್ಯೂರೋ (ಎಸ್​ಸಿಆರ್​ಬಿ) ನೀಡಿರುವ ಅಂಕಿ-ಅಂಶಗಳ ಗಮನಿಸಿದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಕಳೆದ 3 ವರ್ಷದಲ್ಲಿ ಕೊಲೆ, ಅತ್ಯಾಚಾರ, ಪೋಕ್ಸೋ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಕಳೆದ ನಾಲ್ಕು ತಿಂಗಳ ಅಂಕಿಅಂಶಗಳು ಗಾಬರಿ ಬೀಳಿಸುವಂತಿವೆ. ಡ್ರಗ್ಸ್ ಮಾಫಿಯಾ ಕೇಸ್​ಗಳು ಸಹ ಅಧಿಕವಾಗಿ ದಾಖಲಾಗಿವೆ. ಇದರ ಜತೆಗೆ ಲೈಂಗಿಕ ದೌರ್ಜನ್ಯ, ಸೈಬರ್ ವಂಚನೆ, ಹಲ್ಲೆ, ಪ್ರಕರಣಗಳು ಅಧಿಕವಾಗಿವೆ.

    2022ರಿಂದ 2024ರ ಏಪ್ರಿಲ್​ವರೆಗೆ ರಾಜ್ಯದಲ್ಲಿ 3095 ಕೊಲೆ ಪ್ರಕರಣಗಳು ವರದಿಯಾಗಿವೆ. 2024ರಲ್ಲಿ ಬರೀ 4 ತಿಂಗಳಲ್ಲೇ 430 ಹತ್ಯೆಗಳಾಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. 3 ವರ್ಷದಲ್ಲಿ 8310 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಇದೇ ಅವಧಿಯಲ್ಲಿ 1344 ಅತ್ಯಾಚಾರ ಪ್ರಕರಣಗಳು ನಡೆದಿವೆ. 2024ರ 4 ತಿಂಗಳಲ್ಲಿ 1262 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ 198 ಅತ್ಯಾಚಾರ ಪ್ರಕರಣ ವರದಿಯಾಗಿದೆ.

    ಸಾಲು ಸಾಲು ಹತ್ಯೆಗಳು, ಅತ್ಯಾಚಾರ ಪ್ರಕರಣಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತಗೊಂಡು ಜನರಿಗೆ ರಕ್ಷಣೆಯೇ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ರಾಜ್ಯ ಸರ್ಕಾರ, ಗೃಹ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.

    ಇತ್ತೀಚಿನ ಕೆಲ ಕೇಸ್​ಗಳು

    . ಹುಬ್ಬಳ್ಳಿ ಕಾಲೇಜಿನ ಕ್ಯಾಂಪಸ್​ನಲ್ಲಿ ನಡೆದ ನೇಹಾ ಹತ್ಯೆ.

    . ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಯುವತಿ ಅಂಜಲಿ ಕೊಲೆ

    . ಕೊಡಗಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ರುಂಡ ಕಡಿದು ಹತ್ಯೆ

    . ಹಾವೇರಿಯ ಹಾನಗಲ್​ನಲ್ಲಿ ಹಿಂದೂ ಯುವಕರಿಗೆ ಥಳಿತ

    . ರಾಮನವಮಿ ದಿನ ಭಗವಾಧ್ವಜ ಹಿಡಿದು ಹೋಗುತ್ತಿದ್ದ 3 ಯುವಕರ ಮೇಲೆ ಹಲ್ಲೆ

    . ಕೊಡಗಿನ ಸಿದ್ದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಹೋಗುತ್ತಿದ್ದವರ ಮೇಲೆ ಹಲ್ಲೆ

    . ಮೈಸೂರಿನಲ್ಲಿ ಪ್ರಧಾನಿ ಮೋದಿ ಬಗ್ಗೆ ಹಾಡು ರಚಿಸಿದ ಯುವಕನ ಮೇಲೆ ಹಲ್ಲೆ ನಡೆಸಿ, ಸಿಗರೇಟಿಂದ ಸುಟ್ಟಿದ್ದು

    . ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ

    . ಕಡಬದಲ್ಲಿ ಯುವಕನೊಬ್ಬನಿಂದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಆಸಿಡ್

    . ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ಯುವಕನ ಮೇಲೆ ಹಲ್ಲೆ

    . ಮಂಡ್ಯದ ಕೆರೆಗೋಡಿನಲ್ಲಿ ಹನುಮಾನ್ ಧ್ವಜ ಇಳಿಸಿದ್ದಕ್ಕೆ ಗಲಾಟೆ

    . ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ


    ಅಪರಾಧ ತಡೆಗೆ ಪೊಲೀಸರು ಹೆಚ್ಚಿನ ಒತ್ತು ನೀಡಬೇಕು. ಹೆಚ್ಚಿನ ಬೀಟ್ ವ್ಯವಸ್ಥೆಯಾಗಬೇಕು. ಪೊಲೀಸರು ಸಾರ್ವಜನಿಕರ ಸಹಕಾರ ಪಡೆದುಕೊಳ್ಳಬೇಕು. ಅಪರಾಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪೊಲೀಸರು ಸಮವಸ್ತ್ರದಲ್ಲಿ ಇರುವುದನ್ನು ನೋಡಿದರೆ ಆರೋಪಿಗಳು ಅಪರಾಧ ಮಾಡುವುದಕ್ಕೆ ಹೆದರುತ್ತಾರೆ. ಆರೋಪಿಗಳಿಗೆ ಪೊಲೀಸರ ಬಗ್ಗೆ ಭಯ ಬರುವಂತೆ ಮಾಡಬೇಕು. ಎಲ್ಲಾ ಕಡೆ ಸಿಸಿ ಕ್ಯಾಮರಾ ಹೆಚ್ಚಿಗೆ ಅಳವಡಿಸಬೇಕು. ಅಪರಾಧ ಘಟಿಸಿದ ನಂತರ ಪತ್ತೆ ಮಾಡುವುದು ಕಷ್ಟ. 100 ಅಪರಾಧ ಪ್ರಕರಣಗಳು ವರದಿಯಾದರೆ, 45 ಪ್ರಕರಣಗಳು ಮಾತ್ರ ಪತ್ತೆಯಾಗುತ್ತವೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

    | ಡಾ.ಡಿ.ವಿ.ಗುರುಪ್ರಸಾದ್ ನಿವೃತ್ತ ಡಿಜಿಪಿ

    ಪಾಕ್ ಬಳಿ ಅಣುಬಾಂಬ್ ಇದೆ ಅದನ್ನು ನಿರ್ವಹಿಸಲು ದುಡ್ಡಿಲ್ಲ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts