More

  ಯುಪಿಎಸ್​ಸಿ ನಾಡಿಮಿಡಿತ ಅರಿತರೆ ಈಸಿ

  ಯುಪಿಎಸ್​ಸಿ ಪರೀಕ್ಷೆ ಗೆಲ್ಲಲು ತಪಸ್ಸಿನಂತೆ ಅಧ್ಯಯನಶೀಲರಾಗಬೇಕು. ಪ್ರಾಮಾಣಿಕತೆ, ಬದ್ಧತೆ, ನಿರಂತರ ಓದು, ಗುಣಮಟ್ಟದ ಅಧ್ಯಯನ ಕೈಗೊಂಡಿದ್ದೇ ಆದಲ್ಲಿ ಪರೀಕ್ಷೆಯನ್ನು ಸಮರ್ಥವಾಗಿ ಜಯಿಸಬಹುದಾಗಿದೆ ಎಂಬುದು ಇತ್ತೀಚೆಗೆ ರಾಜ್ಯದಿಂದ ಆಯ್ಕೆಯಾಗಿರುವ ಯುಪಿಎಸ್​ಸಿ ಟಾಪರ್ಸ್​ಗಳ ಅಭಿಪ್ರಾಯ. ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮೂವರು ಟಾಪರ್ಸ್​ಗಳು ಸಾಧನೆಗೆ ಕಾರಣವಾದ ಅಂಶಗಳನ್ನು ಹಂಚಿಕೊಂಡಿದ್ದು, ಅದರ ಪೂರ್ಣ ವಿವರ ಇಂತಿದೆ.

  | ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸುವ ಐಎಎಸ್, ಐಪಿಎಸ್ ಹಾಗೂ ಐಎಫ್​ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಆಡಳಿತ ಕೇಂದ್ರದ ಆಯಾಕಟ್ಟಿನ ಹುದ್ದೆಯ ಮೂಲಕ ಸಮಾಜಸೇವೆ ಮಾಡಬಯಸುವ ಆಕಾಂಕ್ಷೆ ಹಲವರಲ್ಲಿ ಇರುತ್ತದೆ. ಈ ಪರೀಕ್ಷೆಯನ್ನು ಗೆಲ್ಲಲು ಅಭ್ಯರ್ಥಿಗಳು ತಪಸ್ಸಿನಂತೆ ಅಧ್ಯಯನಶೀಲರಾಗಬೇಕು. ಪ್ರ್ರಾಮಾಣಿಕತೆ, ಬದ್ಧತೆ, ನಿರಂತರ ಓದು, ಗುಣಮಟ್ಟದ ಅಧ್ಯಯನ ಕೈಗೊಂಡಿದ್ದೇ ಆದಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಸಮರ್ಥವಾಗಿ ಜಯಿಸಬಹುದಾಗಿದೆ. ಇದಕ್ಕೆ ಕಳಸವಿಟ್ಟಂತೆ ಪರೀಕ್ಷೆಯ ವಿವಿಧ ಹಂತಗಳನ್ನು ಎದುರಿಸುವ ಚಾಕಚಕ್ಯತೆ, ಚಾಣಾಕ್ಷತನ, ಕೌಶಲ ಮೈಗೂಡಿಸಿಕೊಳ್ಳಬೇಕು. ಉತ್ತಮ ಮಾರ್ಗದರ್ಶಕರ ಹಿತೋಕ್ತಿಗಳೊಂದಿಗೆ ಕಠಿಣ ಪರಿಶ್ರಮ ಹಾಕಿ ಅಭ್ಯಸಿಸಿದರೆ ಕೇಂದ್ರ ಆಡಳಿತ ಸೇವೆ ಸೇರುವ ಗುರಿ ತಲುಪಬಹುದು ಎಂಬುದನ್ನು ಇತ್ತೀಚಿಗೆ ರಾಜ್ಯದಿಂದ ಆಯ್ಕೆಯಾಗಿರುವ ಯುಪಿಎಸ್​ಸಿ ಟಾಪರ್ಸ್ ಗಳು ಅಭಿಪ್ರಾಯಪಟ್ಟಿದ್ದಾರೆ. ‘ವಿಜಯವಾಣಿ’ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಯುಪಿಎಸ್​ಸಿ ಟಾಪರ್ಸ್​ಗಳಾದ ನಾಗೇಂದ್ರ ಬಾಬು ಕುಮಾರ್, ಡಾ. ಭಾನುಪ್ರಕಾಶ್, ಶಾಂತಪ್ಪ ಕುರುಬರ ಅವರು ತಮ್ಮ ಸಾಧನೆಗೆ ಕಾರಣವಾದ ಅಂಶಗಳನ್ನು ಹಂಚಿಕೊಂಡರು. ಅತೀ ಬುದ್ಧಿವಂತಿಕೆಯುಳ್ಳವರು ಮಾತ್ರ ಯುಪಿಎಸ್​ಸಿ ಪರೀಕ್ಷೆ ಬರೆಯಬೇಕೆಂಬ ಅಲಿಖಿತ ನಿಯಮದ ಬದಲು ಸಾಮಾನ್ಯ ಜ್ಞಾನವುಳ್ಳ ಅಭ್ಯರ್ಥಿಗಳು ಗುರಿ ಈಡೇರಿಸಿಕೊಳ್ಳಲು ಪ್ರಾಮಾಣಿಕತೆ ಹಾಗೂ ಕಠಿಣ ಅಧ್ಯಯನವೇ ಪ್ರಬಲ ಜ್ಞಾನ ದೀವಿಗೆಯಾಗಿದೆ ಎಂದು ಪ್ರತಿಪಾದಿಸಿದರು.

  ಸಿದ್ಧತೆ ಮುಖ್ಯ: ಯುಪಿಎಸ್​ಸಿ ಪರೀಕ್ಷೆ ಎದುರಿಸಲು ಸಮರ್ಥ ಸಿದ್ಧತೆ ಬೇಕು. ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿರುವಂತೆ ಈ ಪರೀಕ್ಷೆ ಜಯಿಸಲು ನಿಖರವಾದ ವೇಳಾಪಟ್ಟಿಯೂ ಅಗತ್ಯ. ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಯುಪಿಎಸ್​ಸಿಗೆ ಸಿದ್ಧತೆ ಮಾಡಿಕೊಳ್ಳಬಹುದು. ಪದವಿ ಮುಗಿದ ಬಳಿಕ 2-3 ವರ್ಷ ಪರೀಕ್ಷೆ ಎದುರಿಸಲು ಗುರಿ ಹಾಕಿಕೊಳ್ಳಬೇಕು. ಪ್ರಿಲಿಮ್್ಸ, ಮುಖ್ಯಪರೀಕ್ಷೆ ಎದುರಿಸಲು ದಿನದಲ್ಲಿ ಇಂತಿಷ್ಟು ಗಂಟೆ ಓದಲು ಸಮಯ ಮೀಸಲಿಡಬೇಕು. ಗುಣಮಟ್ಟದ ಓದಿನೊಂದಿಗೆ ನಿರಂತರ ಅಧ್ಯಯನ ವಿಷಯಗಳ ಮೇಲೆ ಹಿಡಿತ ಸಾಧಿಸಲು ಅವಕಾಶವಾಗುತ್ತದೆ. ಪರೀಕ್ಷೆಯ ಪಠ್ಯ, ಪ್ರಚಲಿತ ವಿದ್ಯಮಾನ ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ಗಂಭೀರತೆ ಹೊಂದಿರಬೇಕು. ತನ್ನ ಸಾಮರ್ಥ್ಯ ಅರಿತು ಸ್ವತಂತ್ರವಾಗಿ ಅಧ್ಯಯನ ಮಾಡಬೇಕೇ ಅಥವಾ ಕೋಚಿಂಗ್ ಸೆಂಟರ್ ಪ್ರಯೋಜನ ಪಡೆಯಬೇಕೆ ಎಂಬುದನ್ನು ಮೊದಲು ನಿರ್ಧರಿಸಬೇಕು. ಇದನ್ನು ಆಧರಿಸಿ ಸ್ಪಷ್ಟ ಚೌಕಟ್ಟು ಹಾಕಿಕೊಂಡು ಅಧ್ಯಯನಶೀಲರಾಗಬೇಕು. ಇವುಗಳನ್ನು ಸಮರ್ಪಕವಾಗಿ ಮಾಡಿದ್ದೇ ಆದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದು ಎಂಬ ಬಗ್ಗೆ ಈ ಸಾಧಕರು ಸಲಹೆ ನೀಡಿದರು.

  ಯುಪಿಎಸ್​ಸಿ ನಾಡಿಮಿಡಿತ ಅರಿತರೆ ಈಸಿ

  ಬುದ್ಧಿವಂತಿಕೆಯೇ ಮಾನದಂಡವಲ್ಲ: ಯುಪಿಎಸ್​ಸಿ ಪರೀಕ್ಷೆ ಬರೆಯಲು ಬುದ್ಧಿವಂತರಾಗಿರಲೇ ಬೇಕು ಎಂಬ ನಿಯಮವೇನು ಇಲ್ಲ. ಜ್ಞಾನದ ಜತೆಗೆ ಕರಾರುವಕ್ಕಾದ ಓದು, ಗುಣಮಟ್ಟದ ಮಾಹಿತಿ ಸಂಗ್ರಹ, ಕಲಿಕೆಯಲ್ಲಿ ನಿರಂತರತೆ, ಕೌಶಲ ವೃದ್ಧಿಸಿಕೊಳ್ಳುವ ಜಾಣ್ಮೆ, ಕಠಿಣ ಪರಿಶ್ರಮ ಹಾಗೂ ಕುಟುಂಬಸ್ಥರ ಬೆಂಬಲ ಅತ್ಯಗತ್ಯ. ಜತೆಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಲಕ್ ಕೂಡ ಇರಬೇಕು. ಪರಿಶ್ರಮದಿಂದ ಅಧ್ಯಯನ ಕೈಗೊಂಡಲ್ಲಿ ಪದವಿಯಲ್ಲಿ ಸಾಧಾರಣ ಅಂಕ ಗಳಿಸಿದವರೂ ಯುಪಿಎಸ್​ಸಿ ಪರೀಕ್ಷೆಯನ್ನು ನಿರಾಯಾಸವಾಗಿ ಎದುರಿಸಿ ಪಾಸಾಗಬಹುದು ಎನ್ನುತ್ತಾರೆ ಡಾ. ಭಾನುಪ್ರಕಾಶ್.

  ಐಚ್ಛಿಕ ವಿಷಯದ ಆಯ್ಕೆ ಎಚ್ಚರ ಅಗತ್ಯ : ಮುಖ್ಯ ಪರೀಕ್ಷೆಯಲ್ಲಿ 9 ಪ್ರಶ್ನೆಪತ್ರಿಕೆಗಳಿರುತ್ತವೆ. ಇವುಗಳಲ್ಲಿ 2 ಪ್ರಶ್ನೆಪತ್ರಿಕೆ ಕಡ್ಡಾಯವಾಗಿರುತ್ತದೆ. ಜತೆಗೆ 2 ಐಚ್ಛಿಕ ವಿಷಯದ ಪ್ರಶ್ನೆಪತ್ರಿಕೆಗಳಿರುತ್ತವೆ. ಇದನ್ನು ಅಭ್ಯರ್ಥಿಯು ಮೊದಲೇ ಆಯ್ಕೆ ಮಾಡಿ ಅಧ್ಯಯನಶೀಲರಾಗಬೇಕು. ತನಗಿಷ್ಟದ ಪಠ್ಯವು ಕೈಹಿಡಿಯುತ್ತದೆ ಎಂಬ ವಿಶ್ವಾಸ ಇದ್ದಲ್ಲಿ ಐಚ್ಛಿಕ ವಿಷಯದಲ್ಲಿ ಮುಂದುವರಿಯಬಹುದು. ಆದರೆ, ಈ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಎದುರಿಸಲು ಬೇಕಾದ ತಯಾರಿ, ಪಠ್ಯ ಅಧ್ಯಯನ, ಕಲಿಕಾ ಸಾಮಗ್ರಿ ಹೊಂದುವುದನ್ನು ಆಖೈರು ಮಾಡಿಕೊಳ್ಳಬೇಕು. ಇಷ್ಟು ಕಲಿಕೆಯನ್ನು 2-3 ವರ್ಷದೊಳಗೆ ಪರಿಪೂರ್ಣವಾಗಿ ಕರಗತ ಮಾಡಿಕೊಳ್ಳಲು ಗುರಿ ಹಾಕಿಕೊಳ್ಳಬೇಕು ಎಂಬ ಡಾ. ಭಾನುಪ್ರಕಾಶ್ ಸಲಹೆ ನೀಡಿದರು.

  ಯುಪಿಎಸ್​ಸಿ ಪರೀಕ್ಷೆ ಎದುರಿಸಲು ಬುದ್ಧಿವಂತಿಕೆ ಮಾತ್ರ ಮುಖ್ಯವಾಗದು. ನಿರಂತರ ಓದು, ಕಠಿಣ ಪರಿಶ್ರಮ, ಬದ್ಧತೆ, ವ್ಯಾಸಂಗದ ಕೌಶಲ ಅಳವಡಿಸಿಕೊಳ್ಳುವುದರತ್ತ ಗಮನಹರಿಸಬೇಕು. ವ್ಯಕ್ತಿತ್ವ ಪರೀಕ್ಷೆ ವೇಳೆ ಪ್ರಾಮಾಣಿಕ ಉತ್ತರ ನೀಡುವುದು ಯುಕ್ತ. ಎಲ್ಲಕ್ಕಿಂತ ಮುಖ್ಯವಾಗಿ ಪಾಲಕರ ಒತ್ತಾಯಕ್ಕಾಗಿ ಪರೀಕ್ಷೆ ತೆಗೆದುಕೊಳ್ಳುವ ಬದಲು ಇಷ್ಟಪಟ್ಟು ಯುಪಿಎಸ್​ಸಿ ಎದುರಿಸುವ ಛಲ ಹೊಂದಿರಬೇಕು.

  | ಡಾ. ಭಾನುಪ್ರಕಾಶ್, ಯುಪಿಎಸ್​ಸಿ 600ನೇ ರ್ಯಾಂಕ್

  ಕೆಪಿಎಸ್​ಸಿ ಕಾರ್ಯವೈಖರಿ ಬದಲಾಗಲಿ

  ಯುಪಿಎಸ್​ಸಿ ಪರೀಕ್ಷೆ ಮಾದರಿಯಲ್ಲಿ ರಾಜ್ಯದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ನಡೆಸುವ ವಿವಿಧ ಪರೀಕ್ಷೆಗಳು ಅಭ್ಯರ್ಥಿಗಳ ಸಹನೆಯನ್ನು ಕೆಣಕುವಂತಿದೆ. ಕೆಲ ಇಲಾಖಾ ಪರೀಕ್ಷೆಗಳು ಸರಿಯಾಗಿ ನಡೆದರೂ, ಪ್ರಮುಖವಾದ ಕೆಎಎಸ್ ಪರೀಕ್ಷೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಲೇ ಇದೆ. ಒಂದು ವರ್ಷ ಅಧಿಸೂಚನೆ ಹೊರಡಿಸಿದರೆ ಮರುವರ್ಷ ಪ್ರಿಲಿಮ್್ಸ ನಡೆಯುತ್ತದೆ. ಅದರ ಮುಂದಿನ ವರ್ಷ ಅಂತಿಮ ಪರೀಕ್ಷೆ ನಡೆಸಲಾಗುತ್ತದೆ. ಮತ್ತೊಂದು ವರ್ಷ ವ್ಯಕ್ತಿತ್ವ ಪರೀಕ್ಷೆ ನಡೆದು ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಹೊರಬೀಳಲು ಪಂಚ ವಾರ್ಷಿಕ ಯೋಜನೆ ರೀತಿ ಆಗಿಬಿಡುತ್ತದೆ. ಇದರಿಂದ ಅಭ್ಯರ್ಥಿಗಳಿಗೆ ಭಾರೀ ತೊಂದರೆಯಾಗುತ್ತದೆ. ಈ ಅವ್ಯವಸ್ಥೆ ಬದಲು ಪಾರದರ್ಶಕವಾಗಿ ಪರೀಕ್ಷಾ ಪ್ರಕ್ರಿಯೆ ಕೈಗೊಳ್ಳಲು ಪ್ರತೀ ವರ್ಷ ಇಂತಿಷ್ಟು ಹುದ್ದೆಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು. ಇದರಿಂದ ಯುವಸಮೂಹದಲ್ಲಿ ಆತ್ಮವಿಶ್ವಾಸ ವೃದ್ಧಿಗೊಂಡು ಒಂದೆರಡು ವರ್ಷದಲ್ಲಿ ಪರೀಕ್ಷೆ ಪೂರ್ಣಗೊಳಿಸಲು ಅಣಿಯಾಗುತ್ತಾರೆ. ಯುಪಿಎಸ್​ಸಿಯಲ್ಲಿ ಇಂತಹ ವೇಳಾಪಟ್ಟಿ ಇದ್ದು, ಮುಂದಿನ ವರ್ಷದ ವೇಳಾಪಟ್ಟಿಯನ್ನು ಮೊದಲೇ ತಿಳಿಸಲಾಗುತ್ತದೆ. ಯುಪಿಎಸ್​ಸಿಗೆ ಸಾಧ್ಯವಾಗದ್ದು ಕೆಪಿಎಸ್​ಸಿಗೆ ಏಕೆ ಸಾಧ್ಯವಾಗದು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಕೆಪಿಎಸ್​ಸಿ ಹಾಗೂ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಲ್ಲಿ ಯಾವುದೇ ಸಮಸ್ಯೆಯನ್ನು ನಿವಾರಿಸಿ ಪರೀಕ್ಷೆಯನ್ನು ನಿಖರ ಹಾಗೂ ಸಮಯಕ್ಕೆ ಸರಿಯಾಗಿ ನಡೆಸಬಹುದಾಗಿದೆ. ಇಂತಹ ಆಶಾದಾಯಕ ದಿನಗಳು ಬೇಗ ಬರಲಿ ಎಂದು ಶಾಂತಪ್ಪ ಕುರುಬರ ಆಶಿಸಿದರು.

  ಶಾಂತಪ್ಪ ನೆರವಿಗೆ ಬಂದ ಅಭಿಯಾನ: ಯಾವುದೇ ಅಭ್ಯರ್ಥಿಯಲ್ಲಿ ವಿಶೇಷವಾದ ಗುಣವಿರುತ್ತದೆ. ಸಾರ್ವಜನಿಕ ಜೀವನ, ಕಲಿಕೆ ಯಲ್ಲಿ ನಿಪುಣತೆ, ಕ್ರೀಡೆ ಇತ್ಯಾದಿ ವಿಷಯಗಳಲ್ಲಿ ಆಸಕ್ತಿದಾಯಕ ಅಂಶಗಳಿರುತ್ತವೆ. ಇವು ವ್ಯಕ್ತಿತ್ವ ಪರೀಕ್ಷೆ ವೇಳೆ ಪರಿಗಣನೆಗೆ ಬರುವುದುಂಟು. ಪಿಎಸ್​ಐ ಶಾಂತಪ್ಪ ಕುರುಬರ ವಿಷಯದಲ್ಲಿ ಈ ಅಂಶ ಹೆಚ್ಚು ಕೆಲಸ ಮಾಡಿದಂತಿದೆ. ಇವರು ಪೊಲೀಸ್ ಇಲಾಖೆಯ ಪಿಎಸ್​ಐ ಆಗಿ ಕರ್ತವ್ಯನಿರ್ವಹಿಸುವ ವೇಳೆ ಕೈಗೊಂಡ ನಾಗರಿಕ ಸೇವೆ ತುಂಬ ಪ್ರಶಂಸೆಗೆ ಒಳಗಾಗಿತ್ತು. ಗೊರಗುಂಟೆಪಾಳ್ಯದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಗೃಹ ನಿರ್ವಣಕ್ಕಾಗಿ ಅಭಿಯಾನ ಕೈಗೊಂಡಿದ್ದರು. ಇದಕ್ಕೆ ವಿಜಯವಾಣಿ ಕೂಡ ಕೈಜೋಡಿಸಿತ್ತು. ನಾನು ಯುಪಿಎಸ್​ಸಿ ಸಂದರ್ಶನಕ್ಕೆ ಹೋದಾಗ ನನ್ನ ಪ್ರೊಪೈಲ್​ನಲ್ಲಿ ಇದ್ದ ಸಾರ್ವಜನಿಕ ಶೌಚಗೃಹಕ್ಕಾಗಿ ಹೋರಾಟ ಬಗ್ಗೆ ಸಂದರ್ಶನಕಾರರು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಅಂಶವೂ ನನ್ನ ಆಯ್ಕೆಗೆ ಪೂರಕವಾಗಿ ಕೆಲಸ ಮಾಡಿದೆ ಎನ್ನುತ್ತಾರೆ ಶಾಂತಪ್ಪ.

  ಕನ್ನಡದಲ್ಲಿ ಅಧ್ಯಯನ ಸಾಮಗ್ರಿ ಕೊರತೆ: ಯುಪಿಎಸ್​ಸಿ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲೂ ಬರೆದು ಪಾಸು ಮಾಡಬಹುದು. ಪ್ರಿಲಿಮ್್ಸ ಅನ್ನು ಸ್ಥಳೀಯ ಭಾಷೆಯಲ್ಲಿ ಬರೆಯಲು ಅವಕಾಶ ಇದ್ದರೂ, ಮುಖ್ಯ ಪರೀಕ್ಷೆಯನ್ನು ಇಂಗ್ಲಿಷ್​ನಲ್ಲೇ ಬರೆಯಬೇಕಿದೆ. ವ್ಯಕ್ತಿತ್ವ ಪರೀಕ್ಷೆ ವೇಳೆ ಪ್ರಾದೇಶಿಕ ಭಾಷೆಯಲ್ಲಿ ಎದುರಿಸಲು ಅವಕಾಶ ಇದೆ. ಆದರೆ, ಬಹುತೇಕ ಪ್ರಾದೇಶಿಕ ಭಾಷೆಗಳಲ್ಲಿ ಪರಿಪೂರ್ಣವಾದ ಅಧ್ಯಯನ ಸಾಮಗ್ರಿಯೇ ಇಲ್ಲ. ಕನ್ನಡದಲ್ಲೂ ಇಂತಹದ್ದೇ ಪರಿಸ್ಥಿತಿ ಇದೆ. ಈ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ‘ಸ್ಟಡಿ ಮೆಟಿರಿಯಲ್ಸ್’ ಲಭ್ಯವಾಗುವಂತೆ ಮಾಡಿದ್ದಲ್ಲಿ ರೈತರು ಸೇರಿ ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಂತಪ್ಪ ಕುರುಬರ ಸಲಹೆ ನೀಡಿದ್ದಾರೆ.

  ಯುಪಿಎಸ್​ಸಿ ನಾಡಿಮಿಡಿತ ಅರಿತರೆ ಈಸಿ

  ವ್ಯಕ್ತಿತ್ವ ಪರೀಕ್ಷೆಯೇ ನಿರ್ಣಾಯಕ : ಪ್ರಿಲೀಮ್್ಸ ಹಾಗೂ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬಳಿಕ ನಡೆಯುವ ವ್ಯಕ್ತಿತ್ವ ಪರೀಕ್ಷೆಯೇ ಯುಪಿಎಸ್​ಸಿ ಜಯಿಸುವ ನಿರ್ಣಾಯಕ ಎಕ್ಸಾಂ. ಇದರಲ್ಲಿ ಯಶಸ್ವಿ ಯಾದಲ್ಲಿ ಯುದ್ಧ ಗೆದ್ದಂತೆ. ಅದಕ್ಕಾಗಿ ವ್ಯಕ್ತಿತ್ವ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ ಅಗತ್ಯ. ‘ಕಲ್ಪಿತ ಸಂದರ್ಶನ’ದಲ್ಲಿ ಪಾಲ್ಗೊಳ್ಳುವ ಮೂಲಕ ಒಂದಿಷ್ಟು ಆತ್ಮಸ್ಥೈರ್ಯ ಪಡೆದುಕೊಳ್ಳಬಹುದು. ಆದರೆ, ವ್ಯಕ್ತಿತ್ವ ಸಂದರ್ಶನದ ವೇಳೆ ಕೇಳುವ ಪ್ರಶ್ನೆಗಳಿಗೆ ಸಮರ್ಥವಾಗಿ ಹಾಗೂ ಅಷ್ಟೇ ನಿಖರವಾಗಿ ಉತ್ತರಿಸ ಬೇಕಾಗುತ್ತದೆ. ಒಂದೇ ಪ್ರಶ್ನೆಯನ್ನು ಭಿನ್ನ ಸನ್ನಿವೇಶದಲ್ಲಿ ಅಭ್ಯರ್ಥಿ ಹೇಗೆ ನಿಭಾಯಿಸಬಲ್ಲ ಎಂಬುದನ್ನು ತಿಳಿಯಲು ಸಂದರ್ಶಕರೂ ಇಷ್ಟಪಡುತ್ತಾರೆ. ಹಾಗಾಗಿ ಕಡಿಮೆ ಅವಧಿಯಲ್ಲಿ ಪ್ರಶ್ನೆಗೆ ಉತ್ತರ ನೀಡುವಂತಹ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು. ಒಂದು ವೇಳೆ ಉತ್ತರ ತಿಳಿಯದಿದ್ದಲ್ಲಿ ಏನೋ ಹೇಳಲು ಹೋಗಿ ಅಪಾರ್ಥ ಆಗುವ ಸನ್ನಿವೇಶ ಸೃಷ್ಟಿಯಾಗದಿರಲು ಉತ್ತರ ತಿಳಿದಿಲ್ಲ ಎಂದು ಪ್ರಮಾಣಿಕವಾಗಿ ಹೇಳಿದರೂ ತಪ್ಪಲ್ಲ.

  ಕೆಲಸ ಮಾಡುವುದಷ್ಟೇ ನಮ್ಮ ಜವಾಬ್ದಾರಿ, ಫಲ ನಮ್ಮ ಕೈಯಲ್ಲಿ ಇಲ್ಲ. ಯೋಗ್ಯತೆ ಮತ್ತು ಯೋಗ ಎರಡೂ ಸೇರಿದರೆ ಸಾಧನೆಯಾಗುತ್ತದೆ. ಅದಕ್ಕೆ ಸಂಕಲ್ಪ ಮತ್ತು ಶ್ರೀರಕ್ಷೆ ಇರಬೇಕು. ನಮ್ಮ ಯೋಗ್ಯತೆಯನ್ನು ನಾವು ತೋರಿಸಬಹುದು. ತನಗೆ ತಾನು ಸಹಾಯ ಮಾಡಿಕೊಳ್ಳುವವನಿಗೆ ದೇವರು ಕೂಡ ಸಹಾಯ ಮಾಡುತ್ತಾನೆ. ಹೀಗಾಗಿ ನಮಗೆ ನಾವೇ ಸಹಾಯ ಮಾಡಿಕೊಳ್ಳಬೇಕು.

  | ಶಾಂತಪ್ಪ ಕುರುಬರ, ಯುಪಿಎಸ್​ಸಿ 644ನೇ ರ್ಯಾಂಕ್

  ಪರೀಕ್ಷೆ ಬರೆಯುವವರಿಗೆ ಟಿಪ್ಸ್

  . ಯುಪಿಎಸ್​ಸಿ ಪರೀಕ್ಷೆ ಎದುರಿಸಲು 2-3 ವರ್ಷ ಪೂರ್ಣ ಸಮಯ ಮೀಸಲಿಡಬೇಕು.

  . ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಯುಕ್ತ.

  . ಸ್ವ ಅಧ್ಯಯನ ಕೈಗೊಂಡರೂ ಉತ್ತಮ ಮಾರ್ಗದರ್ಶಕರೊಬ್ಬರ ನಿಗಾದಲ್ಲಿ ಮುಂದುವರಿಯಬೇಕು.

  . ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ನಿಖರ ವೇಳಾ ಪಟ್ಟಿ, ಅದರಂತೆ ಅಧ್ಯಯನಶೀಲರಾಗಬೇಕು.

  . ಪ್ರಿಲೀಮ್ಸ್, ಮುಖ್ಯಪರೀಕ್ಷೆ ಎದುರಿಸಲು ದಿನದಲ್ಲಿ ಇಂತಿಷ್ಟು ಗಂಟೆ ಓದಲು ಸಮಯ ಮೀಸಲಿಡಬೇಕು.

  . ನಿರಂತರ ಅಧ್ಯಯನ ವಿಷಯಗಳ ಮೇಲೆ ಹಿಡಿತ ಸಾಧಿಸಲು ಅವಕಾಶ ನೀಡುತ್ತದೆ.

  . ಅಧ್ಯಯನದ ವೇಳೆ ಪ್ರಚಲಿತ ವಿದ್ಯಮಾನ ತಿಳಿಯಲು ದಿನಪತ್ರಿಕೆಗಳ ಓದು ಕೂಡ ಸಹಕಾರಿಯಾಗಲಿದೆ.

  . ಯೂ ಟ್ಯೂಬ್​ನಲ್ಲಿ ಸಿಗುವ ‘ಕಲ್ಪಿತ ಸಂದರ್ಶನ’ದ ರೀತಿಯಲ್ಲಿ ವ್ಯಕ್ತಿತ್ವ ಪರೀಕ್ಷೆ ತಯಾರಾಗುವುದು ಸಲ್ಲ.

  . ವ್ಯಕ್ತಿತ್ವ ಪರೀಕ್ಷೆ ವೇಳೆ ಸಂದರ್ಶಕರು ಕೇಳುವ ಪ್ರಶ್ನೆಗೆ ನಿಖರ, ಸ್ಪಷ್ಟ ಉತ್ತರ ನೀಡುವತ್ತ ಗಮನಹರಿಸಿ.

  . ಸ್ನೇಹಿತರೊಂದಿಗೆ ಹೇಗೆ ಮಾತನಾಡುವಿರೋ ಅದೇ ರೀತಿ ಸಂದರ್ಶಕರ ಜತೆಗೂ ಸಂವಹನ ನಡೆಸಿ.

  ರೋಲ್ ಮಾಡೆಲ್ ಆಗಿ: ಪ್ರಸ್ತುತ ಯುವಜನತೆ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಅದರಲ್ಲೂ ರೀಲ್ಸ್​ನತ್ತಲೇ ಹಲವರ ಗಮನ ಕೇಂದ್ರಿತವಾಗಿದೆ. ಇದರಿಂದ ಡಿಜಿಟಲೈಸೇಶನ್ ವಿಭಾಗದ ಹುಚ್ಚು ಧನಾತ್ಮಕತೆ ಬದಲು ಋಣಾತ್ಮಕತೆಯತ್ತ ಕೊಂಡೊಯ್ಯುತ್ತಿದೆ. ಸದ್ಯ ಹೆಚ್ಚಿನವರು ರೀಲ್ಸ್ ನೋಡುವುದರಲ್ಲೇ ತಲ್ಲೀನರಾಗಿದ್ದಾರೆ. ಪರೀಕ್ಷೆಯಲ್ಲಿ ಪಾಸಾಗುವವರೆಗೂ ರೀಲ್ಸ್ ಮಾಡುವುದರ ಬದಲು ರೋಲ್ ಮಾಡಲ್ ಆಗಿ ಹೊರಹೊಮ್ಮುವುದು ಮುಖ್ಯ ಎನ್ನುತ್ತಾರೆ ನಾಗೇಂದ್ರ ಬಾಬು ಕುಮಾರ್.

  ಯುಪಿಎಸ್​ಸಿ ನಾಡಿಮಿಡಿತ ಅರಿತರೆ ಈಸಿ

  ಪರೀಕ್ಷೆ ನಾಡಿಮಿಡಿತ ಅರ್ಥೈಸಿಕೊಳ್ಳಿ: ಯುಪಿಎಸ್​ಸಿ ಪರೀಕ್ಷೆಯನ್ನು ಜಯಿಸಲು ಇದರ ಆಳ-ಅಗಲ ಹಾಗೂ ನಾಡಿಮಿಡಿತ ಗೊತ್ತಿರಬೇಕು. ಪರೀಕ್ಷೆ ನಡೆಯುವ ನಾಡಿಮಿಡಿತವನ್ನು ಸಮರ್ಥವಾಗಿ ಅರಿತು ಸಿದ್ಧತೆ ಆರಂಭಿಸಬೇಕು. ಮುಖ್ಯ ಪರೀಕ್ಷೆಗಿಂತ ಪ್ರಿಲಿಮ್್ಸ ಪರೀಕ್ಷೆ ತುಂಬಾ ಕಠಿಣವಾಗಿರುತ್ತದೆ. ಕೇವಲ ಒಂದು ಅಂಕ ಕಡಿಮೆಯಾದರೂ ಮರಳಿಯತ್ನ ಮಾಡಬೇಕಾಗುತ್ತದೆ. ಈ ಸೂಕ್ಷ್ಮವನ್ನು ಅರಿತಲ್ಲಿ ಪ್ರಿಲಿಮ್್ಸ ಹರ್ಡಲ್ಸ್ ದಾಟುವುದು ಕಷ್ಟವಾಗದು.


  ಅಭ್ಯರ್ಥಿಗಳು ತಯಾರಿ ಹಂತದಲ್ಲಿ ಕಂಫರ್ಟ್ ಝೋನ್​ನಿಂದ ಹೊರಬರಬೇಕು. ಆಗ ಇತರ ಆಕಾಂಕ್ಷಿಗಳು ಹೇಗೆ ತಯಾರಾಗುತ್ತಿದ್ದಾರೆಂಬುದು ತಿಳಿಯುತ್ತದೆ. ಅಲ್ಲಿಯವರೆಗೆ ‘ನನ್ನ ಅಧ್ಯಯನ ಕ್ರಮ ಸರಿಯಾಗಿದೆ’ ಎಂದೇ ತಿಳಿದುಕೊಂಡಿರುತ್ತೇವೆ. ಇತರರ ಸಿದ್ಧತೆ ತಿಳಿಯುತ್ತಿದ್ದಂತೆ ಛಲ ಹುಟ್ಟಿಕೊಳ್ಳುತ್ತದೆ. ಆರಂಭದಿಂದಲೇ ಪ್ರಾಮಾಣಿಕತೆ ಇದ್ದಾಗ ನಾನೊಬ್ಬ ಅಧಿಕಾರಿ ಎಂಬ ಭಾವನೆ ಮೂಡುತ್ತದೆ. ಈ ಮನಸ್ಥಿತಿ ಇನ್ನಷ್ಟು ಸ್ಪೂರ್ತಿ ನೀಡುತ್ತದೆ.

  | ನಾಗೇಂದ್ರ ಬಾಬು ಕುಮಾರ್ ಯುಪಿಎಸ್​ಸಿ, 160ನೇ ರ್ಯಾಂಕ್

  ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್: ಹೊಸ ಬಾಂಬ್‌ ಸಿಡಿಸಿದ ದೇವರಾಜೇಗೌಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts