More

    ಮರ್ಯಾದೆ ಉಳಿಸಿಕೊಳ್ಳಲು ಕೈನಿಂದ ಮಿಷನ್ 50

    ಫತೇಪುರ: ಈಗಾಗಲೇ ಸೋಲನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಈಗ ತನ್ನ ಮರ್ಯಾದೆ ಉಳಿಸಿಕೊಳ್ಳಲು 50 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಹೋರಾಡುತ್ತಿದೆ. ಹೇಗಾದರೂ ಮಾಡಿ 50 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್​ನ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

    ಉತ್ತರಪ್ರದೇಶದ ಫತೇಪುರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮಲಲ್ಲಾ ಮತ್ತೆ ಟೆಂಟ್​ನಲ್ಲಿ ಕೂರಬೇಕಾದಿತು. ಏಕೆಂದರೆ ಅವರು ಬುಲ್ಡೋಜರ್ ಮೂಲಕ ರಾಮ ಮಂದಿರವನ್ನು ಕೆಡವಲು ಹಿಂದೆ-ಮುಂದೆ ನೋಡುವುದಿಲ್ಲ. ಬುಲ್ಡೋಜರ್ ಅನ್ನು ಎಲ್ಲಿ ಬಳಸಬೇಕು ಅಥವಾ ಎಲ್ಲಿ ಬಳಸಬಾರದು ಎಂಬುದನ್ನು ಯೋಗಿ ಆದಿತ್ಯನಾಥ ಅವರಿಂದ ಕಲಿಯಬೇಕು. ಒಂದೆಡೆ ದೇಶದ ಪ್ರಗತಿಗಾಗಿ ಎನ್​ಡಿಎ ಶ್ರಮಿಸುತ್ತಿದ್ದರೆ, ಇಂಡಿ ಒಕ್ಕೂಟ ದೇಶದಲ್ಲಿ ಅಶಾಂತಿ ಹರಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಾಕಿಸ್ತಾನದ ಕುರಿತು ಕಾಂಗ್ರೆಸ್ ನಾಯಕರು ಹೆಚ್ಚು ಚಿಂತಿತರಾಗಿದ್ದಾರೆ. ಪಾಕಿಸ್ತಾನದ ಬಳಿ ಅಣುಬಾಂಬ್​ಗಳಿವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಆ ಆಣುಬಾಂಬ್​ಗಳನ್ನು ನಿರ್ವಹಣೆ ಮಾಡುವಷ್ಟು ಹಣ ಪಾಕಿಸ್ತಾನದ ಬಳಿ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಫತೇಪುರ್​ದಲ್ಲಿ ಹಾಲಿ ಸಂಸದೆ ಸಾಧಿ್ವ ನಿರಂಜನ ಜ್ಯೋತಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಐದನೇ ಹಂತದಲ್ಲಿ ಮೇ 25ರಂದು ಇಲ್ಲಿ ಮತದಾನ ನಡೆಯಲಿದೆ.

    ಸಮಾಜ ಒಡೆಯುವ ಕೆಲಸ: ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರನ್ನು ಯಾವುದೇ ಕಾರಣಕ್ಕೆ ನಂಬಬಾರದು. ವೋಟ್ ಜಿಹಾದ್​ಗೆ ಕರೆ ನೀಡುವ ಅವರದ್ದು ಸಮಾಜವನ್ನು ಒಡೆಯುವುದೇ ಕೆಲಸ ಎಂದು ಮೋದಿ ಆರೋಪಿಸಿದರು. ಸಮಾಜವಾದಿ ಪಕ್ಷ ಈಗಲೂ ಮಾಫಿಯಾಗಳಿಗೆ ಬೆಂಬಲ ನೀಡುತ್ತದೆ ಹಾಗೂ ಕಾಂಗ್ರೆಸ್ ಭಯೋ ತ್ಪಾದನಾ ನೀತಿಗಳನ್ನು ಸಮರ್ಥಿಸಿಕೊಂಡು ಬಂದಿದೆ. ಇಂಥವರ ಕೈಯಲ್ಲಿ ರಾಷ್ಟ್ರ ಸುರಕ್ಷಿತವಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ಸವಾಲಿನಲ್ಲಿ ಗೆಲ್ಲೋರನ್ನು ಮೋದಿ ಎನ್ನುತ್ತಾರೆ!: ಸವಾಲಿಗೇ ಸವಾಲನ್ನು ಒಡ್ಡುವ ಎರಡನೇ ಹೆಸರು ಮೋದಿ! ‘ಜೋ ಚುನೌತಿ ಮೇ ಜಿತ್ ಜಾತಾ ಹೈ, ವಹೀ ಮೋದಿ ಕಹಲಾತಾ ಹೈ (ಯಾರು ಸವಾಲಿನಲ್ಲಿ ಗೆಲ್ಲುತ್ತಾರೋ ಅವರೇ ಮೋದಿ ಎನಿಸಿಕೊಳ್ಳುತ್ತಾರೆ)’- ಪ್ರತಿಪಕ್ಷಗಳಿಗೆ ಹೀಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಹಮೀರ್​ಪುರ್​ನ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ನೀವು ಈ ಸೇವಕನ ಮೇಲೆ ನಂಬಿಕೆ ಇರಿಸಿದಿರಿ ಹಾಗೂ ನಾನು ನಿಮ್ಮ ಸೇವೆಯಲ್ಲಿ ಸಮರ್ಪಿತನಾದೆ. ಜಲಜೀವನ್ ಮಿಷನ್ ಗ್ರಾಮೀಣ ಭಾಗದ ನೀರಿನ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ‘ಉಜ್ವಲಾ’ ಯೋಜನೆ ಗೃಹಿಣಿಯರಿಗೆ ವರದಾನವಾಗಿ ಪರಿಣಮಿಸಿದೆ. ನನ್ನ ಸೋದರಿಯರು ಈಗ ಸೌದೆ ಕಡಿಯಲು, ಸಂಗ್ರಹಿಸಲು ಶ್ರಮ ಪಡಬೇಕಾದ ಅವಶ್ಯಕತೆ ಇಲ್ಲ’ ಎಂದರು.

    ಸಂವಿಧಾನಕ್ಕೆ ಧಕ್ಕೆ ತಂದಿದ್ದು ಗಾಂಧಿ ಕುಟುಂಬ : ಸಂವಿಧಾನಕ್ಕೆ ನಿಜವಾಗಿಯೂ ಧಕ್ಕೆ ತಂದವರು ಯಾರು? ಈ ಬಗ್ಗೆ ಕಾಂಗ್ರೆಸ್ ಪ್ರಾಮಾಣಿಕವಾಗಿ ಉತ್ತರಿಸಲಿ ಎಂದು ಆಗ್ರಹಿಸಿದ ಮೋದಿ, ಜವಾಹರಲಾಲ್ ನೆಹರುರಿಂದ ರಾಹುಲ್ ಗಾಂಧಿವರೆಗೆ (ಗಾಂಧಿ ಕುಟುಂಬ) ನಾಲ್ಕು ಪೀಳಿಗೆಗಳು ಸಂವಿಧಾನಕ್ಕೆ ಧಕ್ಕೆ ತಂದಿವೆ. ನೆಹರು ಪ್ರಧಾನಿಯಾಗಿದ್ದಾಗಲೇ ಮೊದಲ ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಆದರೆ, ಬಿಜೆಪಿಗೆ 400 ಸ್ಥಾನಗಳು ಬಂದರೆ ಸಂವಿಧಾನ ಬದಲಾಗಲಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದರು.

    ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ, ನೆಹರು ಸಂವಿಧಾನಕ್ಕೆ ತಿದ್ದುಪಡಿ ತಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರು. ನೆಹರು ಪುತ್ರಿ ಇಂದಿರಾ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ತಂದು ನ್ಯಾಯಾಲಯದ ಆದೇಶವನ್ನೇ ಬದಲಿಸಿದರು. ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿ ಕೂಡ ಶಾ ಬಾನೋ ಪ್ರಕರಣದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ನ್ಯಾಯಾಲಯದ ಆದೇಶವನ್ನು ಬದಲಿಸಿದರು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನೇ ರಾಹುಲ್ ಗಾಂಧಿ ಹರಿದು, ಕಸದ ಬುಟ್ಟಿಗೆ ಹಾಕಿದರು ಎಂದು ವಿವರಿಸಿದ ಮೋದಿ, ಗಾಂಧಿ ಕುಟುಂಬ ನಿರಂತರವಾಗಿ ಸಂವಿಧಾನಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.

    ಜವಾಹರಲಾಲ್ ನೆಹರು ಅವರಿಂದ ರಾಹುಲ್ ಗಾಂಧಿಯವರೆಗೆ ನಾಲ್ಕೂ ಪೀಳಿಗೆಗಳ ನಾಯಕರು ಒಂದಲ್ಲ ಒಂದು ರೀತಿಯಲ್ಲಿ ಸಂವಿಧಾನಕ್ಕೆ ಧಕ್ಕೆ ತಂದಿದ್ದಾರೆ. ಆದರೆ ನಮ್ಮ ಸರ್ಕಾರವು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವುದಿಲ್ಲ. ಇದೇ ಕಾರಣಕ್ಕಾಗಿ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ನಾನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು. ಈಗ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿ, ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿದು ಮುಸ್ಲಿಮ್​ಗೆ ನೀಡಲಾಗುತ್ತದೆ ಎಂದರು.

    ವಿದೇಶಕ್ಕೆ ಹಾರಲಿದ್ದಾರೆ : ರಾಹುಲ್ ಗಾಂಧಿ-ಅಖಿಲೇಶ್ ಯಾದವ್ ಹೆಸರು ಪ್ರಸ್ತಾಪ ಮಾಡದೆ ಯೇ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಇಬ್ಬರು ರಾಜಕುಮಾರರು ಚುನಾವಣೆ ಫಲಿತಾಂಶ (ಜೂನ್ 4) ಪ್ರಟಕವಾದ ಬಳಿಕ ಸೋಲಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಲು ಟಿಕೆಟ್ ಬುಕ್ ಮಾಡಿದ್ದಾರಂತೆ ಎಂದರು.

    ಕಲ್ಯಾಣ್ ಸಿಂಗ್​ರನ್ನು ಸ್ಮರಿಸಿದ ಪ್ರಧಾನಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ದಿ.ಕಲ್ಯಾಣ್ ಸಿಂಗ್ ಅಪ್ರತಿಮ ರಾಮಭಕ್ತರಾಗಿದ್ದರು ಎಂದು ಶ್ಲಾಘಿಸಿದ ಮೋದಿ, ರಾಮಮಂದಿರದ ನಿರ್ವಣಕ್ಕಾಗಿ ಕಲ್ಯಾಣ್ ಸಿಂಗ್ ತಮ್ಮ ಸರ್ಕಾರವನ್ನೇ ತ್ಯಾಗ ಮಾಡಿದರು. ಆದರೆ, ಸಿಂಗ್ ನಿಧನರಾದಾಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕೂಡ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರು ಬರಲಿಲ್ಲ. ರಾಮಭಕ್ತನಿಗೆ ಶ್ರದ್ಧಾಂಜಲಿ ಅರ್ಪಿಸಿದರೆ ತಮ್ಮ ವೋಟ್​ಬ್ಯಾಂಕ್​ಗೆ ಬೇಸರವಾಗುತ್ತದೆ ಎಂಬ ಧೋರಣೆಯಿಂದ ಕಲ್ಯಾಣ್​ರನ್ನು ಅವಮಾನಿಸಿದ ನಾಯಕರು ಉತ್ತರಪ್ರದೇಶದಲ್ಲಿ ಮಾಫಿಯಾದವರು ಸತ್ತರೆ, ಅವರ ಅಂತ್ಯಸಂಸ್ಕಾರಕ್ಕೆ ಹೋಗುತ್ತಾರೆ ಎಂದು ಕಿಡಿಕಾರಿದರು.

    ಪಾಕ್ ಬಳಿ ಅಣುಬಾಂಬ್ ಇದೆ ಅದನ್ನು ನಿರ್ವಹಿಸಲು ದುಡ್ಡಿಲ್ಲ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts