ಕರೊನಾ ಕಾಲದಲ್ಲಿ ಒಲಿಂಪಿಕ್ಸ್ ಕಲರವ; ಜಾಗತಿಕ ಕ್ರೀಡಾಹಬ್ಬಕ್ಕೆ ಸಜ್ಜಾದ ಟೋಕಿಯೊ

Olympics
Published on
ಜಗತ್ತಿನೆಲ್ಲೆಡೆ ಕರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರಿದಿರುವ ನಡುವೆ ಸಮುರಾಯ್ ನಾಡು ಜಪಾನ್​ನಲ್ಲಿ ಒಲಿಂಪಿಕ್ಸ್​ಗೆ ವೇದಿಕೆ ಸಜ್ಜಾಗುತ್ತಿದೆ. 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ನಿಧಾನವಾಗಿ ಟೋಕಿಯೊದಲ್ಲಿ ಒಗ್ಗೂಡುತ್ತಿದ್ದಾರೆ. ಕರೊನಾ ಕಾಲದ ಸವಾಲಿನ ನಡುವೆ ಯಶಸ್ವಿ ಕ್ರೀಡಾಕೂಟದ ಆಯೋಜನೆಗೆ ಆತಿಥೇಯ ಜಪಾನ್ ಜತೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ದೃಢಸಂಕಲ್ಪ ಮಾಡಿದೆ. ಸಾಂಕ್ರಾಮಿಕ ಪಿಡುಗಿಗೆ ಜನರು ಬಲಿಯಾಗುತ್ತಿರುವ ಈ ಸಮಯದಲ್ಲಿ ಇಂಥ ಮಹಾ ಕ್ರೀಡಾಕೂಟ ಬೇಕಿತ್ತಾ ಎಂಬ ಚರ್ಚೆಗಳ ನಡುವೆಯೂ, ವಿಶ್ವದ ಮನೋಸ್ಥೈರ್ಯ ಹೆಚ್ಚಿಸಲು ಒಲಿಂಪಿಕ್ಸ್ ಅವಕಾಶ ಕಲ್ಪಿಸಿದೆ. ಕ್ರೀಡಾಕೂಟ ರದ್ದುಗೊಳಿಸಿದರೆ ಜಪಾನ್ ಅನುಭವಿಸುವ ಆರ್ಥಿಕ ನಷ್ಟಕ್ಕಿಂತಲೂ ಹೆಚ್ಚಾಗಿ ಜಗತ್ತಿನ ಜನರ ಮನೋಬಲ ಕುಸಿಯುವುದನ್ನು ತಪ್ಪಿಸುವ ಸಲುವಾಗಿ, ಕರೊನಾ ವಿರುದ್ಧದ ಹಲವಾರು ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಆರೋಗ್ಯಕರ ಮತ್ತು ಸುರಕ್ಷಿತ ಟೋಕಿಯೊ ಒಲಿಂಪಿಕ್ಸ್ ಸಂಘಟಿಸಲಾಗುತ್ತಿದೆ.

| ಪ್ರಸಾದ್ ಶೆಟ್ಟಿಗಾರ್

57 ವರ್ಷಗಳ ಬಳಿಕ ಜಪಾನ್​ನಲ್ಲಿ ಒಲಿಂಪಿಕ್ಸ್: ಜಪಾನ್​ನಲ್ಲಿ ಕೊನೆಯ ಬಾರಿ 1964ರಲ್ಲಿ ಬೇಸಿಗೆ ಒಲಿಂಪಿಕ್ಸ್ ನಡೆದಿತ್ತು. ಅದು ಜಪಾನ್ 2ನೇ ಮಹಾ ಯುದ್ಧದ ಬಳಿಕ ತನ್ನ ಪುನರುತ್ಥಾನವನ್ನು ಜಗತ್ತಿಗೆ ತೋರಿಸಿದ ಒಲಿಂಪಿಕ್ಸ್ ಆಗಿತ್ತು. ಇದೀಗ 57 ವರ್ಷ ಗಳ ಬಳಿಕ ಜಪಾನ್​ಗೆ ಸಾಂಕ್ರಾಮಿಕ ಪಿಡುಗಿನ ವಿರುದ್ಧ ತನ್ನ ವಿಜಯವನ್ನು ಪ್ರದರ್ಶಿಸುವ ಅವಕಾಶ ಲಭಿಸಿದೆ.

ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಕ್ರೀಡಾಕೂಟ: ಜಪಾನ್​ನಲ್ಲಿ ಇತ್ತೀಚೆಗೆ ಕರೊನಾ ಪ್ರಕರಣಗಳು ಏರಿಕೆ ಕಂಡಿರುವುದರಿಂದ ದೇಶದಲ್ಲಿನ ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಒಲಿಂಪಿಕ್ಸ್ ಆತಿಥ್ಯ ವಹಿಸಲಾಗುತ್ತಿದೆ. ಕರೊನಾ 4ನೇ ಅಲೆಯಿಂದಾಗಿ ಜಪಾನ್​ನಲ್ಲಿ ಜುಲೈ 12ರಿಂದ ಆಗಸ್ಟ್ 22ರವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು, ಇದೇ ಸಮಯದಲ್ಲಿ (ಜುಲೈ 23-ಆಗಸ್ಟ್ 8) ಒಲಿಂಪಿಕ್ಸ್ ಸಂಘಟಿಸಲಾಗುತ್ತಿದೆ. ಲಾಕ್​ಡೌನ್​ನಂತೆಯೇ ಇರುವ ಈ ತುರ್ತು ಪರಿಸ್ಥಿತಿಯಲ್ಲಿ ರಾತ್ರಿ 8ರ ನಂತರ ಯಾರೂ ಹೊರಗೆ ಅನಗತ್ಯವಾಗಿ ಓಡಾಡುವಂತಿಲ್ಲ. ಇದು ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವವರಿಗೂ ಅನ್ವಯಿಸಲಿದೆ. ಇದರಿಂದ ವಿದೇಶಿ ಕ್ರೀಡಾಪಟುಗಳ ರಾತ್ರಿ ಪಾರ್ಟಿಗಳಿಗೂ ಕಡಿವಾಣ ಬೀಳಲಿದೆ.

ಖಾಲಿ ಕ್ರೀಡಾಂಗಣದಲ್ಲಿ ಸ್ಪರ್ಧೆ: ಒಲಿಂಪಿಕ್ಸ್ ವೇಳೆ ಸಾಮಾನ್ಯವಾಗಿ ಪ್ರವಾಸೋದ್ಯಮವೇ ಹೆಚ್ಚಿನ ಲಾಭ ತಂದುಕೊಡುತ್ತದೆ. ಆದರೆ ಈ ಬಾರಿ ವಿದೇಶಿ ಮಾತ್ರವಲ್ಲ, ಸ್ವದೇಶಿ ಪ್ರೇಕ್ಷಕರೂ ಇಲ್ಲದೆ ಕ್ರೀಡಾಸ್ಪರ್ಧೆಗಳು ನಡೆಯಲಿವೆ. ಹೀಗಾಗಿ ಟೋಕಿಯೊದಲ್ಲಿ ಒಲಿಂಪಿಕ್ಸ್ ವೇಳೆ ಪ್ರವಾಸೋದ್ಯಮದಿಂದ ಬರುವ ಆದಾಯ ಕೈತಪ್ಪಲಿದೆ. ಇದು ಜಪಾನ್ ಆರ್ಥಿಕತೆಗೆ 1.62 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಉಂಟು ಮಾಡಲಿದೆ ಎಂದು ಅಂದಾಜಿಸಲಾಗಿದೆ. ಟಿಕೆಟ್ ಆದಾಯವಿಲ್ಲದೆ ಸಂಘಟಕರು 10 ಸಾವಿರ ಕೋಟಿ ರೂ. ನಷ್ಟ ಎದುರಿಸಲಿದ್ದಾರೆ. ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಿಗೂ ವಿಐಪಿ ಅತಿಥಿಗಳಿಗೆ ಮಾತ್ರ ಪ್ರವೇಶವಿರಲಿದೆ.

ಕ್ರೀಡಾಗ್ರಾಮ ಪ್ರವೇಶಿಸುವ ಮುನ್ನ ಕ್ವಾರಂಟೈನ್ ಟೋಕಿಯೊದಲ್ಲಿ ಒಲಿಂಪಿಕ್ಸ್ ಕ್ರೀಡಾಗ್ರಾಮವನ್ನು ಪ್ರವೇಶಿಸುವ ಮುನ್ನ ಎಲ್ಲ ಕ್ರೀಡಾಪಟುಗಳು ಕ್ವಾರಂಟೈನ್​ಗೆ ಒಳಪಡಬೇಕು. ವಿಶ್ವದೆಲ್ಲೆಡೆಯಿಂದ ಬಂದವರು 96 ಅಥವಾ 72 ಗಂಟೆ ಮೊದಲಿನ 2 ನೆಗೆಟಿವ್ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ರೂಪಾಂತರಿ ಡೆಲ್ಟಾ ಹಾವಳಿ ಹೊಂದಿರುವ ಭಾರತ ಸಹಿತ ಕೆಲ ದೇಶಗಳ ಕ್ರೀಡಾಪಟುಗಳು ಪ್ರಯಾಣಕ್ಕೆ 7 ದಿನ ಮುನ್ನ ನಿರಂತರ ಕೋವಿಡ್ ಪರೀಕ್ಷೆಗೆ ಒಳಪಟ್ಟಿರಬೇಕು. ಟೋಕಿಯೊ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೆ ಎಲ್ಲರಿಗೂ ಒಂದು ಬಾರಿ ಕೋವಿಡ್-19 ಟೆಸ್ಟ್ ನಡೆಯುತ್ತದೆ. ಪಾಸಿಟಿವ್ ಆದರೆ ಮತ್ತಷ್ಟು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ನೆಗೆಟಿವ್ ಆದರೂ ಮುಂದಿನ 3ರಿಂದ 7 ದಿನಗಳಲ್ಲಿ ಪರೀಕ್ಷೆ ಎದುರಿಸುತ್ತಲೇ ಇರಬೇಕಾಗುತ್ತದೆ.

ಕೋವಿಡ್ ನಿಯಮ ಮುರಿದರೆ ಔಟ್: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಎಲ್ಲರೂ ಅಗತ್ಯವಿರುವ ಕಡೆಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಅದೇ ರೀತಿ ಕೋವಿಡ್-19 ಪರೀಕ್ಷೆ ತಪ್ಪಿಸಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕ್ರೀಡಾಪಟುಗಳನ್ನು ಒಲಿಂಪಿಕ್ಸ್​ನಿಂದ ಹೊರಹಾಕುವ ಅಧಿಕಾರವನ್ನು ಸಂಘಟಕರು ಉಳಿಸಿಕೊಂಡಿದ್ದಾರೆ. ಪ್ರತಿ ಕ್ರೀಡಾಸ್ಪರ್ಧೆಗೂ ಕರೊನಾ ಸಂಬಂಧಿಸಿ ಪ್ರತ್ಯೇಕ ನಿಯಮಾವಳಿ ರೂಪಿಸಲಾಗಿದೆ.

ವೆಚ್ಚ ಏರಿಕೆ: ಕರೊನಾ ಕಾರಣದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಭರ್ತಿ ಒಂದು ವರ್ಷ ಮುಂದೂಡಲ್ಪಟ್ಟ ಕಾರಣ ಆತಿಥೇಯ ಜಪಾನ್​ಗೆ ಶೇಕಡ 22 ಹೆಚ್ಚುವರಿ ಖರ್ಚು ಎದುರಾಗಿದೆ. ಕಳೆದ ವರ್ಷ ಕ್ರೀಡಾಕೂಟದ ಬಜೆಟ್ 93,785 ಕೋಟಿ ರೂ. (1,260 ಕೋಟಿ ಡಾಲರ್) ಆಗಿದ್ದರೆ, ಈ ವರ್ಷ ಅದು 1,14,635 ಕೋಟಿ ರೂ.ಗೆ (1,540 ಕೋಟಿ ಡಾಲರ್) ಏರಿಕೆಯಾಗಿದೆ. ಅಂದರೆ ಒಂದು ವರ್ಷ ಮುಂದೂಡುವಿಕೆಯಿಂದ 20,844 ಕೋಟಿ ರೂ. (280 ಕೋಟಿ ಡಾಲರ್) ಹೆಚ್ಚುವರಿ ಖರ್ಚು ಎದುರಾಗಿದೆ. ಈ ಮೂಲಕ ಇದು ಇತಿಹಾಸದಲ್ಲೇ ಅತ್ಯಧಿಕ ಖರ್ಚಿನ ಒಲಿಂಪಿಕ್ಸ್ ಕ್ರೀಡಾಕೂಟವೆನಿಸಿದೆ. ‘ಇದನ್ನು ಖರ್ಚು ಎನ್ನುವುದಕ್ಕಿಂತ ಹೂಡಿಕೆ ಎನ್ನಬೇಕು’ ಎಂದು ಸಂಘಟನಾ ಸಮಿತಿಯ ಸಿಇಒ ತೊಶಿರೊ ಮುಟೋ ಹೇಳುತ್ತಾರೆ. ಈ ಪೈಕಿ 49,886 ಕೋಟಿ ರೂ. (670 ಕೋಟಿ ಡಾಲರ್) ಖಾಸಗಿ ವಲಯದಿಂದ ಹೂಡಿಕೆಯಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 9,680 ಕೋಟಿ ರೂ.ಗಳನ್ನು (130 ಕೋಟಿ ಡಾಲರ್) ಆತಿಥೇಯರಿಗೆ ನೀಡಿದೆ.

2021ರಲ್ಲಿ ನಡೆದರೂ ಇದು ‘ಟೋಕಿಯೊ 2020’: ಕರೊನಾದಿಂದಾಗಿ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿದ್ದರೂ ಈ ಒಲಿಂಪಿಕ್ಸ್ ಟೋಕಿಯೊ-2020 ಎಂದೇ ಕರೆಯಲ್ಪಡುತ್ತಿದೆ. ಈ ಹೆಸರಿನಲ್ಲಿ ಕಳೆದ 4-5 ವರ್ಷಗಳಿಂದ ನಡೆದಿರುವ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಇದಕ್ಕೆ ಕಾರಣ. ಮತ್ತೆ ಟೋಕಿಯೊ-2021 ಎಂದು ಬ್ರಾಂಡ್ ಮಾಡಬೇಕಾದರೆ ಸಂಘಟಕರಿಗೆ ಹೆಚ್ಚುವರಿ ಖರ್ಚುಗಳು ಎದುರಾಗಲಿವೆ. ಭವಿಷ್ಯದ ಜನಾಂಗಕ್ಕೆ ಸಂದೇಶ ಸಾರುವ ಉದ್ದೇಶವೂ ಇದರ ಹಿಂದಿದೆ. 2020ರಲ್ಲಿ ಸಾಂಕ್ರಾಮಿಕ ಪಿಡುಗು ಜಗತ್ತನ್ನು ಕಾಡಿದರೂ, ಹೇಗೆ ವಿಶ್ವವೆಲ್ಲ ಒಂದಾಗಿ ಅದನ್ನು ಎದುರಿಸಿತು. ಲಕ್ಷಾಂತರ ಜನರ ಪ್ರಾಣವನ್ನು ವೈರಸ್ ಬಲಿ ಪಡೆದರೂ, ಜಗತ್ತು ಹೇಗೆ ಕುಗ್ಗದೆ ಮುನ್ನಡೆಯಿತು ಎಂಬುದನ್ನು ತಿಳಿಯಪಡಿಸುವ ಉದ್ದೇಶವೂ ಈ ಹೆಸರಿನ ಹಿಂದಿದೆ.

ರದ್ದುಗೊಂಡರೆ ಜಪಾನ್ ತತ್ತರಿಸುತ್ತಿತ್ತು: ಕರೊನಾದಿಂದಾಗಿ ಈ ವರ್ಷವೂ ಒಲಿಂಪಿಕ್ಸ್ ನಡೆಯದೆ ರದ್ದುಗೊಂಡಿದ್ದರೆ ಆತಿಥೇಯ ಜಪಾನ್ ದೇಶದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬೀಳುತ್ತಿತ್ತು. ಒಲಿಂಪಿಕ್ಸ್​ಗಾಗಿ ಜಪಾನ್ ಲಕ್ಷ ಕೋಟಿ ರೂ.ಗೂ ಅಧಿಕ ಖರ್ಚು ಮಾಡಿದೆ. ಪರೋಕ್ಷ ಹೂಡಿಕೆಗಳು ನಷ್ಟವಾಗುತ್ತಿದ್ದರೂ, ನೇರಹೂಡಿಕೆಗಳಿಗೆ ಅಪಾಯವಿರಲಿಲ್ಲ. ಏಕೆಂದರೆ ಐಒಸಿ, ಸ್ಥಳೀಯ ಸಂಘಟಕರು, ಪ್ರಸಾರ ಮತ್ತು ಪ್ರಾಯೋಜಕತ್ವ ಕಂಪನಿಗಳು ಕ್ರೀಡಾಕೂಟಕ್ಕೆ ದೊಡ್ಡ ಮೊತ್ತದ ವಿಮೆ ಮಾಡಿಸಿವೆ. ಹೀಗಾಗಿ ಕೂಟ ರದ್ದುಗೊಂಡರೆ ವಿಮಾ ಕಂಪನಿಗಳೂ ದಿವಾಳಿಯಾಗುವ ಅಪಾಯವಿದ್ದವು. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ, ಒಲಿಂಪಿಕ್ಸ್ ಕ್ರೀಡಾಕೂಟವನ್ನು ‘ಮಾರಕ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಮಾನವಿಯತೆಯ ಜಯ’ ಎಂದೇ ಐಒಸಿ ಮತ್ತು ಜಪಾನ್ ಸರ್ಕಾರ ಬಿಂಬಿಸಿಕೊಂಡು ಬಂದಿರುವುದರಿಂದ ಇದನ್ನು ರದ್ದುಗೊಳಿಸುವ ಮಾತೇ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net