ಏಕದಿನ ವಿಶ್ವಕಪ್​ನಲ್ಲಿ ಇಂದು ಅದ್ದೂರಿ ಆರಂಭೋತ್ಸವವಿಲ್ಲ, ಕ್ಯಾಪ್ಟನ್ಸ್​ ಮೀಟ್​ ಮಾತ್ರ!

opening web
Published on

ಅಹಮದಾಬಾದ್​: ಬಾಲಿವುಡ್​ ತಾರೆಯರ ಆಕರ್ಷಣೆ ಹಾಗೂ ಅದ್ದೂರಿ ಆರಂಭೋತ್ಸವದೊಂದಿಗೆ 13ನೇ ಆವೃತ್ತಿಯ ಏಕದಿನ ವಿಶ್ವಕಪ್​ ಟೂರ್ನಿಗೆ ಚಾಲನೆ ದೊರೆಯುವ ನಿರೀಕ್ಷೆ ಹುಸಿಯಾಗಿದೆ. ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಮುನ್ನ ಬುಧವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವರ್ಣರಂಜಿತ ಸಮಾರಂಭ ಆಯೋಜಿಸುವ ಯೋಜನೆಯನ್ನು ಆತಿಥೇಯ ಬಿಸಿಸಿಐ ಕೊನೇಕ್ಷಣದಲ್ಲಿ ಕೈಬಿಟ್ಟಿದೆ. ಆದರೆ ಟೂರ್ನಿಯಲ್ಲಿ ಆಡುವ ಎಲ್ಲ 10 ತಂಡಗಳ ನಾಯಕರು ಬುಧವಾರ ಐಸಿಸಿ ಆಯೋಜಿಸಿರುವ "ಕ್ಯಾಪ್ಟನ್ಸ್​ ಮೀಟ್​'ನಲ್ಲಿ ಭಾಗವಹಿಸಲಿದ್ದು, ನಂತರ ಲೇಸರ್​ ಶೋ ಮಾತ್ರ ನಡೆಯಲಿದೆ ಎಂದು ವರದಿಯಾಗಿದೆ.

ಟಿಕೆಟ್​ ಮಾರಾಟದ ನಂತರ ಉದ್ಘಾಟನಾ ಸಮಾರಂಭದ ಬಗ್ಗೆಯೂ ಬಿಸಿಸಿಐ ಕೊನೇಕ್ಷಣದವರೆಗೆ ಗೊಂದಲ ಮೂಡಿಸಿರುವುದಕ್ಕೆ ಕ್ರಿಕೆಟ್​ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿನ್​ ಜಾಗತಿಕ ರಾಯಭಾರಿ

ದಿಗ್ಗಜ ಸಚಿನ್​ ತೆಂಡುಲ್ಕರ್​ ಏಕದಿನ ವಿಶ್ವಕಪ್​-2023ರ ಜಾಗತಿಕ ರಾಯಭಾರಿಯಾಗಿ ಮಂಗಳವಾರ ಐಸಿಸಿಯಿಂದ ನೇಮಕಗೊಂಡಿದ್ದಾರೆ. 6 ಬಾರಿ ವಿಶ್ವಕಪ್​ನಲ್ಲಿ ಆಡಿ, 2011ರಲ್ಲಿ ಟ್ರೋಫಿ ಗೆಲುವು ಕಂಡಿರುವ ಸಚಿನ್​, ಗುರುವಾರ ಅಹಮದಾಬಾದ್​ನಲ್ಲಿ ನಡೆಯಲಿರುವ ಇಂಗ್ಲೆಂಡ್​-ನ್ಯೂಜಿಲೆಂಡ್​ ನಡುವಿನ ಉದ್ಘಾಟನಾ ಪಂದ್ಯಕ್ಕೆ ಮುನ್ನ ಟ್ರೋಫಿಯೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡು ಟೂರ್ನಿ ಆರಂಭವನ್ನು ಘೋಷಿಸಲಿದ್ದಾರೆ. 1987ರಲ್ಲಿ ಭಾರತದಲ್ಲಿ ನಡೆದ ಮೊದಲ ವಿಶ್ವಕಪ್​ ವೇಳೆ ಸಚಿನ್​ ಬಾಲ್​ಬಾಯ್​ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net