

ಹಾಂಗ್ರೆೌ: ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಹೆಪ್ಟಾಥ್ಲಾನ್ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್, ಸ್ಪರ್ಧೆಯಲ್ಲಿ ಭಾಗವಹಿಸಿದ ತೃತೀಯ ಲಿಂಗಿಯಿಂದಾಗಿ ತನಗೆ ಕಂಚಿನ ಪದಕ ತಪ್ಪಿತು ಎಂದು ದೂರಿದ್ದಾರೆ. ಈ ಮೂಲಕ ಕಂಚು ವಿಜೇತ ದೇಶಬಾಂಧವೆ ಅಥ್ಲೀಟ್ ನಂದಿನಿ ಅಗಸರ ವಿರುದ್ಧವೇ ಆರೋಪ ಮಾಡಿ ವಿವಾದ ಸೃಷ್ಟಿಸಿದ್ದಾರೆ.
ಸ್ವಪ್ನಾ 2018ರ ಏಷ್ಯಾಡ್ನಲ್ಲಿ ಚಿನ್ನ ಗೆದ್ದಿದ್ದರು. "ಅಥ್ಲೆಟಿಕ್ಸ್ ನಿಯಮ ಪ್ರಕಾರ ತೃತೀಯ ಲಿಂಗಿಗೆ ಮಹಿಳೆಯರ ವಿಭಾಗದಲ್ಲಿ ಭಾಗವಹಿಸಲು ಅವಕಾಶ ನೀಡಬಾರದಿತ್ತು' ಎಂದೂ "ಎಕ್ಸ್'ನಲ್ಲಿ ಸೋಮವಾರ ಪೋಸ್ಟ್ ಹಾಕಿದ ಸ್ವಪ್ನಾ, ಬಳಿಕ ಅದನ್ನು ಡಿಲೀಟ್ ಮಾಡಿದರು. ಪ್ರತಿಯಾಗಿ 20 ವರ್ಷದ ನಂದಿನಿ ಕೂಡ ಸ್ವಪ್ನಾ ತನ್ನ ಆರೋಪಗಳಿಗೆ ಸಾಕ್ಷ್ಯ ನೀಡಲಿ ಎಂದಿದ್ದಾರೆ. ನಂದಿನಿಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಪದಕವಾಗಿದೆ.
ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ (ಎಎಫ್ಐ) ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಈ ವರ್ಷ ಮಾರ್ಚ್ 31ರಿಂದ ಜಾರಿಗೆ ಬಂದಿರುವ ವಿಶ್ವ ಅಥ್ಲೆಟಿಕ್ಸ್ ನಿಯಮ ಪ್ರಕಾರ, "ಪುರುಷ ಪ್ರೌಢಾವಸ್ಥೆ' ಕ್ರೀಡಾಪಟುಗಳು ಮಹಿಳೆಯರ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ.